ಉದಯಸೂರ್ಯದ ಸಿನಿಮಾ ಧ್ವನಿಸುರುಳಿಯನ್ನು ಎಎಸ್ಪಿ ಅನಿಲ್‌ಕುಮಾರ್ ಭೂಮರಡ್ಡಿ ಬಿಡುಗಡೆಗೊಳಿಸಿದರು. ಎಸ್.ಪಿ.ಮಂಜುನಾಥ್, ಎಸ್.ಎಸ್.ಪ್ರಕಾಶ್, ತ್ರಿವೇಣಿ, ದಾನಂ, ವೈದ್ಯನಾಥ್ ಇತರರಿದ್ದರು. 
ನ್ಯೂಸ್

ಮೇ 16ರಂದು ಉದಯಸೂರ್ಯ ತೆರೆ ಕಾಣಲಿದೆ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಗ್ರಾಮೀಣ ಭಾಗದ ಯುವಕರೇ ನಿರ್ಮಿಸಿ, ನಿರ್ದೇಶಿಸಿ, ನಟಿಸಿರುವ ಉದಯಸೂರ್ಯ ಎಂಬ ಕನ್ನಡ ಚಲನಚಿತ್ರ ಮೇ 16ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಚಿತ್ರವನ್ನು ಶಿವಮೊಗ್ಗ, ನ್ಯಾಮತಿ, ಹಂಚಿನ ಸಿದ್ದಾಪುರ, ದಾವಣಗೆರೆ, ಆನವೇರಿ, ಹೊನ್ನಾಳಿ ಮುಂತಾದೆಡೆ ಚಿತ್ರೀಕರಿಸಲಾಗಿದೆ.

ಭದ್ರಾವತಿ ತಾಲೂಕು ಹಂಚಿನ ಸಿದ್ದಾಪುರದ ಎಸ್.ಪಿ.ಮಂಜುನಾಥ್, ಎಂ.ಸುನೀಲ್ ಹಾಗೂ ಎಚ್.ಎಸ್.ಹರೀಶ್ ಚಿತ್ರವನ್ನು ನಿರ್ಮಿಸಿದ್ದಾರೆ. ಇದೇ ಗ್ರಾಮದ ಯುವ ಪ್ರತಿಭೆ ಎಸ್.ಎಸ್.ಪ್ರಕಾಶ್ ಚಿತ್ರವನ್ನು ನಿರ್ದೇಶಿಸಿ, ನಾಯಕರಾಗಿ ನಟಿಸಿದ್ದಾರೆ. ಚಿತ್ರ ತಂಡ ಸುದ್ದಿಗೋಷ್ಠಿಯಲ್ಲಿ ಸಿನಿಮಾದ ವಿಶೇಷತೆಗಳನ್ನು ಹಂಚಿಕೊಂಡಿತು. ಎಎಸ್ಪಿ ಅನಿಲ್‌ಕುಮಾರ್ ಭೂಮರಡ್ಡಿ ಚಿತ್ರದ ಟ್ರೇಲರ್, ಧ್ವನಿಸುರುಳಿ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ನಿರ್ಮಾಪಕ ಎಸ್.ಪಿ.ಮಂಜುನಾಥ್, ಈ ಚಿತ್ರ ವಿಭಿನ್ನ ಕಥಾಹಂದರವನ್ನು ಒಳಗೊಂಡಿದೆ ಎಂದರು. ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ, ನಿರ್ದೇಶನದ ಜತೆಗೆ ನಾಯಕನಾಗಿ ಅಭಿನಯಿಸಿರುವ ಎಸ್.ಎಸ್.ಪ್ರಕಾಶ್ ಮಾತನಾಡಿ, ಒಂದು ಹಳ್ಳಿಯಲ್ಲಿ ನಡೆದ ನೈಜ ಕಥೆಯನ್ನು ಆಧರಿಸಿ ಸಿನಿಮಾ ಮಾಡಲಾಗಿದೆ ಎಂದು ತಿಳಿಸಿದರು.

ಶಿವಮೊಗ್ಗ ಹಾಗೂ ಭದ್ರಾವತಿ ತಾಲೂಕಿನ ಅನೇಕರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ 7 ಹಾಡುಗಳು, 5 ಫೈಟ್‌ಗಳಿವೆ. ರಾಜ್ಯಾದ್ಯಂತ ಸುಮಾರು 40-50 ಸಿಂಗಲ್ ಮತ್ತು ಮಲ್ಟಿಫ್ಲೆಕ್ಸ್‌ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಶಿವಮೊಗ್ಗದಲ್ಲಿ ಭಾರತ್ ಸಿನಿಮಾಸ್‌ನಲ್ಲಿ ಚಿತ್ರ ಪ್ರದರ್ಶನವಾಗಲಿದೆ ಎಂದರು.

ನಾಯಕಿ ತ್ರಿವೇಣಿ, ಕಲಾವಿದರಾದ ವೈದ್ಯನಾಥ್, ದಾನಂ ಸುದ್ದಿಗೋಷ್ಠಿಯಲ್ಲಿದ್ದರು.