ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪುತ್ರ, ಅಲ್ಲಿನ ಸಚಿವ ಉದಯನಿಧಿ ಸ್ಟಾಲಿನ್ ಇದೀಗ ಇನ್ನೊಮ್ಮೆ ಸನಾತನ ಧರ್ಮದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಮೂಲಕ ಅವರು ಮತ್ತೊಮ್ಮೆ ಹಿಂದೂಗಳ ಕೆಂಗಣ್ಣಿಗೆ ಗುರಿ ಆಗುವಂತಾಗಿದೆ.
ಸನಾತನ ಧರ್ಮ ಡೆಂಘಿ-ಮಲೇರಿಯಾ ಇದ್ದ ಹಾಗೆ ಎಂದು ಕೆಲವು ದಿನಗಳ ಹಿಂದೆ ಹೇಳಿದ್ದ ಉದಯನಿಧಿ, ಆ ಬಳಿಕ ಅದನ್ನು ಸಮರ್ಥಿಸಿಕೊಂಡಿದ್ದರು. ಸನಾತನ ಧರ್ಮದ ಕುರಿತು ಉದಯನಿಧಿ ಹೀಗೆ ಅವಹೇಳನಕಾರಿಯಾಗಿ ಮಾತನಾಡಿದ್ದರ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.
ಉದಯನಿಧಿಯ ಅವಹೇಳನಕಾರಿ ಹೇಳಿಕೆಯನ್ನು ಅನೇಕ ನಾಯಕರು ಖಂಡಿಸಿದ್ದರು. ಮಾತ್ರವಲ್ಲ ಹಿಂದೂಪರ ಸಂಘಟನೆಗಳು ಪ್ರತಿಭಟನೆಯನ್ನೂ ನಡೆಸಿದ್ದವು. ಅದಾಗ್ಯೂ ಉದಯನಿಧಿ ಇನ್ನೊಮ್ಮೆ ಸನಾತನ ಧರ್ಮದ ಬಗ್ಗೆ ಅಪಮಾನಕಾರಿಯಾಗಿ ಮಾತನಾಡಿದ್ದಾರೆ. ಸನಾತನ ಧರ್ಮವನ್ನು ನಿರ್ಮೂಲನೆಗೊಳಿಸಿದರೆ ಅಸ್ಪ್ರಶ್ಯತೆ ತೊಲಗುತ್ತದೆ ಎಂದು ಅವರು ಹೇಳಿದ್ದಾರೆ. ಮಾಧ್ಯಮದವರ ಜತೆ ಮಾತನಾಡುವಾಗ ಉದಯನಿಧಿ ಈ ರೀತಿ ಹೇಳಿದ್ದಾರೆ. -ಏಜೆನ್ಸೀಸ್