ಮುಂಬೈ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧವಾಗಿ ಮಾತನಾಡುತ್ತಿದ್ದ ಗ್ರಾಹಕರೊಬ್ಬರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದ ಕಾರಣಕ್ಕೆ ಕೆಲಸದಿಂದ ಅಮಾನತ್ತಾಗಿದ್ದ ಉಬರ್ ಕಾರು ಚಾಲಕ ಮರಳಿ ಕೆಲಸಕ್ಕೆ ಸೇರ್ಪಡೆಯಾಗಿದ್ದಾರೆ.
ಕ್ಯಾಬ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿ ಚಾಲಕ ರೋಹಿತ್ ಗೌರ್ ಎಂಬಾತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಕಳೆದ ಗುರುವಾರ ಕವಿ ಹಾಗೂ ಕಾರ್ಯಕರ್ತ ಬಪ್ಪದಿತ್ಯಾ ಸರ್ಕಾರ್ ಎಂಬುವರು ಸಿಎಎ ವಿರುದ್ಧ ಮಾತನಾಡುವುದನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡು, ಬಳಿಕ ಅವರನ್ನು ಶಾಂತಾಕ್ರಜ್ ಪೊಲೀಸ್ ಠಾಣೆಗೆ ಕರೆದೊಯ್ದು ಬಂಧಿಸುವಂತೆ ಹೇಳಿದ್ದರು. ಬಳಿಕ ಮುಂಬೈ ಪೊಲೀಸರು ರಾತ್ರಿ 1 ಗಂಟೆಯವರೆಗೂ ವಿಚಾರಣೆ ನಡೆಸಿ ಯಾವುದೇ ಪ್ರಮಾದ ಇಲ್ಲದಿದ್ದರಿಂದ ಬಿಟ್ಟು ಕಳುಹಿಸಿದ್ದರು.
ಬಳಿಕ ಉಬರ್ ಕಂಪನಿ ಚಾಲಕ ನೋಂದಣಿ ಮಾಡಿಕೊಂಡಿದ್ದ ಆ್ಯಪ್ನ್ನು ತನಿಖಾ ದೃಷ್ಟಿಯಿಂದ ನಿಯಮಿತ ಸಮಯದವರೆಗೂ ಅಂದರೆ 48 ರಿಂದ 72 ಗಂಟೆಗಳವರೆಗು ನಿಷೇಧಿಸಿತ್ತು. ನಮ್ಮ ಗ್ರಾಹಕರ ಸುರಕ್ಷಿತ ದೃಷ್ಟಿಯಿಂದ ಈ ರೀತಿ ಮಾಡಬೇಕಾಯಿತು ಎಂದು ಉಬರ್ ವಕ್ತಾರ ಹೇಳಿದ್ದರು. ವಿಶೇಷವೆಂದರೆ ಈ ಪ್ರಕರಣ ಬೆನ್ನಲ್ಲೇ ಮುಂಬೈ ಬಿಜೆಪಿ ಚಾಲಕನಿಗೆ ಅಲರ್ಟ್ ಸಿಟಿಜನ್ ಅವಾರ್ಡ್ ನೀಡಿ ಸನ್ಮಾನವನ್ನು ಮಾಡಿತ್ತು.
ಇದೀಗ ಗೌರ್ ಮರಳಿ ಕೆಲಸಕ್ಕೆ ಸೇರ್ಪಡೆಯಾಗಿದ್ದು, ಸದ್ಯ ಆತನನ್ನು ಸೂಕ್ಷ್ಮತೆ ಗ್ರಹಿಕೆ ತರಗತಿಗೆ ಕಳುಹಿಸಲಾಗುತ್ತಿದೆ. ಗ್ರಾಹಕರೊಂದಿಗೆ ಒಳ್ಳೆಯ ರೀತಿಯಲ್ಲಿ ವರ್ತಿಸಲು ಹಾಗೂ ಶಿಷ್ಟಾಚಾರ ಪಾಲಿಸುವುದರ ಕಡೆ ಗಮನ ಹರಿಸುವ ಸಲುವಾಗಿ ಆತನಿಗೆ ತರಬೇತಿ ನೀಡಲಾಗುತ್ತಿದೆ. ಆ್ಯಪ್ ಆಧಾರದ ಟ್ಯಾಕ್ಸಿ ಸೇವೆ ಆರಂಭಕ್ಕೂ ಮುನ್ನ ಇದು ಎಲ್ಲ ಚಾಲಕರಿಗೂ ಕಡ್ಡಾಯವಾಗಿದೆ ಎಂದು ಉಬರ್ ವಕ್ತಾರ ತಿಳಿಸಿದ್ದಾರೆ.
ಉತ್ತಮ ಗುಣಮಟ್ಟದ ಸೇವೆ ನೀಡಲು ನಾವು ಪ್ರತಿದಿನ ಪ್ರಯತ್ನಿಸುತ್ತಿದ್ದೇವೆ. ನಮ್ಮೊಳಗಿನ ಮೌಲ್ಯಮಾಪನ ಮಾಡಿಕೊಂಡು ನಮ್ಮ ಗುಣಮಟ್ಟವನ್ನು ಮುಟ್ಟಲು ನಮ್ಮ ನೀತಿ ಮತ್ತು ಸಮುದಾಯ ಮಾರ್ಗದರ್ಶಿಯೊಂದಿಗೆ ಸೂಕ್ಷ್ಮತೆ ಗ್ರಹಿಕೆ ತರಗತಿಗಳಿಗೆ ಚಾಲಕರನ್ನು ಕಳುಹಿಸುತ್ತೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)