ನ್ಯೂಸ್

ಖಾದರ್ ನೆರವಿಂದ ಮನೆ ಸೇರಿದ ವಿದ್ಯಾರ್ಥಿನಿ

ಮಂಗಳೂರು: ಕರೊನಾಪೀಡಿತ ಇಟಲಿಯಿಂದ ಬಂದು ಬೆಂಗಳೂರಿನಲ್ಲಿ ಬಾಕಿಯಾಗಿದ್ದ ಮಂಗಳೂರಿನ ವಿದ್ಯಾರ್ಥಿನಿ ಕೊನೆಗೂ ಭಾನುವಾರ ಬೆಳಗ್ಗೆ ಸುರಕ್ಷಿತವಾಗಿ ಮನೆ ತಲುಪಿದ್ದಾರೆ.

ಸುರತ್ಕಲ್ ನಿವಾಸಿ, ವಾಯುಪಡೆ ನಿವೃತ್ತ ಅಧಿಕಾರಿ ಶಿವರಾಮ ಭಟ್- ಪ್ರೊ.ಶೈಲಜಾ ಭಟ್ ಪುತ್ರಿ ಶ್ರೀಮಧು ಮಾ.15ರಂದು ವಿಶೇಷ ವಿಮಾನದಲ್ಲಿ 21 ವಿದ್ಯಾರ್ಥಿಗಳ ಜತೆ ನವದೆಹಲಿಗೆ ಬಂದಿಳಿದಿದ್ದರು. ಅಲ್ಲಿ ಕ್ವಾರಂಟೈನ್ ಮುಗಿಸಿ ಎಲ್ಲ ಪರೀಕ್ಷೆಯಲ್ಲಿ ಕರೊನಾ ನೆಗೆಟಿವ್ ಬಂದಿರುವ ಶ್ರೀಮಧು, ಸಂಸದ ತೇಜಸ್ವಿ ಸೂರ್ಯ ಕರ್ನಾಟಕದ ನಿವಾಸಿಗಳಿಗೆ ಬೆಂಗಳೂರು ತಲುಪಲು ವ್ಯವಸ್ಥೆ ಮಾಡಿದ್ದ ವಿಶೇಷ ಬಸ್​ನಲ್ಲಿ ಶುಕ್ರವಾರ ರಾತ್ರಿ 1 ಗಂಟೆ ಸುಮಾರಿಗೆ ಬೆಂಗಳೂರಿಗೆ ಬಂದಿದ್ದರು.

ಆದರೆ ಬೆಂಗಳೂರಿನಿಂದ ಮಗಳನ್ನು ಸುರತ್ಕಲ್​ನ ಮನೆಗೆ ಕರೆಸಿಕೊಳ್ಳಲು ದ.ಕ. ಡಿಸಿ, ಸಹಾಯಕ ಆಯುಕ್ತರ ಅನುಮತಿ ಪಡೆಯಲು ಆಗಿಲ್ಲ. ಕೊನೆಗೆ ವಕೀಲ ಅರುಣ್ ಬಂಗೇರ ಮೂಲಕ ವಿಷಯ ತಿಳಿದ ಶಾಸಕ ಯು.ಟಿ. ಖಾದರ್, ಭಾನುವಾರ ಖುದ್ದಾಗಿ ಶ್ರೀಮಧುವನ್ನು ಬೆಂಗಳೂರಿನಿಂದ ಸುರತ್ಕಲ್​ಗೆ ಕರೆತಂದಿದ್ದಾರೆ ಎಂದಿರುವ ಶಿವರಾಮ ಭಟ್ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.