ನ್ಯೂಸ್

ಚೀನಾ ವಿದ್ಯಾರ್ಥಿಗಳ ಅಮೆರಿಕ ಪ್ರವೇಶಕ್ಕೆ ನಿರ್ಬಂಧ: ಹಾಂಕಾಂಗ್ ವಿದ್ಯಾರ್ಥಿಗಳಿಗೂ ಕೆಲವು ವಿಶೇಷ ಅನುಕೂಲ ರದ್ದು

ವಾಷಿಂಗ್ಟನ್: ಚೀನಾ ಪೀಪಲ್ಸ್ ಲಿಬರೇಷನ್ ಸೇನೆ ಜತೆ ನಂಟು ಹೊಂದಿರುವ ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧಕರ ಪ್ರವೇಶವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಬಂಧಿಸಿದ್ದಾರೆ. ಈ ವಿದ್ಯಾರ್ಥಿಗಳ ಮೂಲಕ ಅಮೆರಿಕದ ತಂತ್ರಜ್ಞಾನ ರಹಸ್ಯ ಮತ್ತು ಬೌದ್ಧಿಕ ಆಸ್ತಿಯನ್ನು ಕದಿಯಲು ಚೀನಾ ಅನೇಕ ವರ್ಷಗಳಿಂದ ಪರೋಕ್ಷವಾಗಿ ಪ್ರಯತ್ನ ನಡೆಸುತ್ತಿದೆ. ಇದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶ್ವೇತಭವನ ತಿಳಿಸಿದೆ. ಆದರೆ, ಹಾಂಕಾಂಗ್ ವಿದ್ಯಾರ್ಥಿಗಳಿಗೆ ಕೆಲ ವಿಶೇಷ ವಿನಾಯಿತಿಯನ್ನು ನೀಡಲಾಗಿದೆ.

ಜತೆಗೆ ಹಾಂಕಾಂಗ್ ನೀಡಲಾಗಿದ್ದ ಕೆಲವು ವಿಶೇಷ ಅನುಕೂಲಗಳನ್ನು ರದ್ದು ಮಾಡುವ ನಿರ್ಧಾರವನ್ನು ಟ್ರಂಪ್​ರ ಆಡಳಿತ ಕೈಗೊಂಡಿದೆ. ಇದರಿಂದ ಗಡಿಪಾರು ಒಪ್ಪಂದ, ದ್ವಿ-ಬಳಕೆ ತಂತ್ರಜ್ಞಾನದ ರಫ್ತು ನಿಯಂತ್ರಣ ಮುಂತಾದ ಹಲವು ವಿಷಯಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. ಹಾಂಕಾಂಗ್ ಮೇಲೆ ಹೆಚ್ಚಿನ ಹಿಡಿತ ಸಾಧಿಸಲು ವಿವಾದಾತ್ಮಕ ಭದ್ರತಾ ಮಸೂದೆಗೆ ಚೀನಾ ಸಂಸತ್ ಅನುಮೋದನೆ ನೀಡಿದ ನಂತರ ಅಮೆರಿಕ ಈ ಕ್ರಮ ಕೈಗೊಂಡಿದೆ.

ಬ್ರಿಟನ್ ಕೂಡ ಹಾಂಕಾಂಗ್ ವಿವಾದಾತ್ಮಕ ಭದ್ರತಾ ಮಸೂದೆಯನ್ನು ಚೀನಾ ಅಂಗೀಕರಿಸಿರುವ ಬಗ್ಗೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಳವಳ ವ್ಯಕ್ತಪಡಿಸಿವೆ. ಇದರಿಂದ ಕುಪಿತಗೊಂಡು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಚೀನಾ, ಇದು ವಿಶ್ವಸಂಸ್ಥೆಯಲ್ಲಿ ರ್ಚಚಿಸಬೇಕಾದ ವಿಷಯವೇ ಅಲ್ಲ ಎಂದಿದೆ.

ಬ್ರಿಟನ್​ನ ಮಾಜಿ ವಸಾಹತು ಹಾಂಕಾಂಗ್ ಬಗ್ಗೆ ಚೀನಾ ಅನುಸರಿಸುತ್ತಿರುವ ರೀತಿಯನ್ನು ಟ್ರಂಪ್ ಶುಕ್ರವಾರದ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು. ಹಾಂಕಾಂಗ್​ನ ದೀರ್ಘಕಾಲದ ಹೆಮ್ಮೆಯ ಸ್ಥಾನಮಾನವನ್ನು ಚೀನಾ ಹಾಳುಗೆಡವುತ್ತಿದೆ ಎಂದರು.

ವಿದ್ಯಾರ್ಥಿಗಳಿಗೆ ನಿರ್ಬಂಧ ಏಕೆ?: ಚೀನೀಯರ ಆರ್ಥಿಕ ಬೇಹುಗಾರಿಕೆ ಮತ್ತು ತಂತ್ರಜ್ಞಾನ ಕಳ್ಳತನಕ್ಕೆ ಸಂಬಂಧಿಸಿ ಸುಮಾರು 1,000 ಪ್ರಕರಣಗಳ ತನಿಖೆ ನಡೆಸುತ್ತಿರುವುದಾಗಿ ಎಫ್​ಬಿಐ ಫೆಬ್ರವರಿಯಲ್ಲಿ ಹೇಳಿತ್ತು. ಬಹಳ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಿರುವ ಚೀನಿ ವಿದ್ಯಾರ್ಥಿಗಳನ್ನು ಹೊರ ಹಾಕುವಂತೆ ರಿಪಬ್ಲಿಕನ್ನರು ಬಹಳ ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ.

ಅಮೆರಿಕಕ್ಕೆ ನಷ್ಟ: ಚೀನಿ ವಿದ್ಯಾರ್ಥಿಗಳ ಮೇಲೆ ನಿರ್ಬಂಧ ಹೇರಿದರೆ ಅಮೆರಿಕದ ವಿಶ್ವ ವಿದ್ಯಾಲಯಗಳಿಗೆ ಅಪಾರ ನಷ್ಟವಾಗಲಿದೆ. ಯಾಕೆಂದರೆ ಅವುಗಳು ಬಹುತೇಕವಾಗಿ ವಿದೇಶಿ ವಿದ್ಯಾರ್ಥಿಗಳ ಟ್ಯೂಷನ್ ಶುಲ್ಕವನ್ನು ಅವಲಂಬಿಸಿವೆ. ಕರೊನಾ ವೈರಸ್ ಹಾವಳಿಯಿಂದಾಗಿ ವಿದೇಶಿ ವಿದ್ಯಾರ್ಥಿಗಳು ತಮ್ಮ ದೇಶಕ್ಕೆ ವಾಪಸು ಹೋಗಿರುವುದರಿಂದ ವಿವಿಗಳು ಈಗಾಗಲೇ ಭಾರಿ ನಷ್ಟ ಅನುಭವಿಸಿವೆ. ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿರುವ ವಿದೇಶಿ ವಿದ್ಯಾರ್ಥಿಗಳಲ್ಲಿ ಚೀನಾದ ಪಾಲೇ ದೊಡ್ಡದು. ಕಳೆದ ದಶಕದಲ್ಲಿ ಚೀನಾದ ಸುಮಾರು 3.70 ಲಕ್ಷ ವಿದ್ಯಾರ್ಥಿಗಳು ಅಧ್ಯಯನ ನಡೆಸಿದ್ದಾರೆ. ಟ್ರಂಪ್ ಆದೇಶ ಪದವಿ ವಿದ್ಯಾರ್ಥಿಗಳ ಮೇಲೆ ನೇರವಾಗಿ ಪರಿಣಾಮ ಬೀರದು.

ಟ್ರಂಪ್ ತಂತ್ರ?

ಕೋವಿಡ್-19 ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲಾಗದೆ ಟೀಕೆಗೆ ಒಳಗಾಗಿರುವ ಟ್ರಂಪ್, ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದ್ದಾರೆಂದು ಟೀಕಾಕಾರರು ಅಭಿಪ್ರಾಯ ಪಟ್ಟಿದ್ದಾರೆ. ಟ್ರಂಪ್ ನಿರ್ಧಾರ ‘ತುಂಬಾ ನಿರಾಶಾದಾಯಕ’ ಎಂದು ಸೆನೆಟ್​ನ ಡೆಮಾಕ್ರಟ್ ಪಕ್ಷದ ಸದಸ್ಯ ಚುಕ್ ಶುಮರ್ ಹೇಳಿದ್ದಾರೆ.

ಪ್ರಜಾಪ್ರಭುತ್ವ-ಪರ ಚಳವಳಿ

ಕ್ರಿಮಿನಲ್ ಅಪರಾಧ ಎಸಗಿದ ಅಪರಾಧಿಗಳನ್ನು ಚೀನಾ ಮೇನ್​ಲ್ಯಾಂಡ್​ನಲ್ಲಿ ವಿಚಾರಣೆ ನಡೆಸುವ ವಿವಾದಾತ್ಮಕ ಕಾನೂನು ಜಾರಿ ವಿರೋಧಿಸಿ 2019ರ ಏಪ್ರಿಲ್​ನಲ್ಲಿ ಹಾಂಕಾಂಗ್​ನಲ್ಲಿ ಪ್ರತಿಭಟನೆ ಭುಗಿಲೆದ್ದಿತು. ಆರು ತಿಂಗಳ ಸತತ ಪ್ರತಿಭಟನೆಯ ನಂತರ ಈ ಕಾನೂನನ್ನು ಕೈಬಿಡುವುದಾಗಿ ಹಾಂಕಾಂಗ್ ಸ್ವಾಯತ್ತ ಆಡಳಿತ ಹೇಳಿತು. ಆದರೆ ಅಷ್ಟರಲ್ಲಾಗಲೆ ಈ ಪ್ರತಿಭಟನೆಯು ಪ್ರಜಾಪ್ರಭುತ್ವ ಪರ ಚಳವಳಿಯಾಗಿ ರೂಪಾಂತರಗೊಂಡಿತು. ಈ ಚಳವಳಿಯನ್ನು ಹತ್ತಿಕಲ್ಲು ಚೀನಾ ಪ್ರಯತ್ನಿಸಿತು ಆದರೆ, ಆಗಲಿಲ್ಲ. ಈ ಮಧ್ಯೆ, ಚೀನಾದಲ್ಲಿ ಕೋವಿಡ್-19 ಪ್ರಸರಣ ಆರಂಭವಾಗಿ ಆಡಳಿತಗಾರರ ಲಕ್ಷ್ಯ ಅತ್ತ ಹರಿಯಿತು. ಹಾಂಕಾಂಗ್​ನಲ್ಲೂ ಚಳವಳಿ ನಿಂತಿತು. ಈಗ ಕರೊನಾ ತಹಬಂದಿಗೆ ಬಂದಿರುವುದರಿಂದ ಚೀನಾ ಹಾಂಕಾಂಗ್​ಗೆ ಅಂಕೆ ಹಾಕುವ ಭದ್ರತಾ ಮಸೂದೆಗೆ ಒಪ್ಪಿಗೆ ನೀಡಿದೆ. 1997ರವರೆಗೆ ಬ್ರಿಟನ್​ನ ವಸಾಹತು ಆಗಿದ್ದ ಹಾಂಕಾಂಗ್ ಒಪ್ಪಂದದನ್ವಯ ಪುನಃ ಚೀನಾದ ತೆಕ್ಕೆಗೆ ಬಂದಿತ್ತು. ‘ಒಂದು ದೇಶ, ಎರಡು ವ್ಯವಸ್ಥೆ’ ನಿಯಮದನ್ವಯ ಹಾಂಕಾಂಗ್​ಗೆ ಕೆಲವು ಸ್ವಾಯತ್ತೆ ಹಾಗೂ ಜನರಿಗೆ ಸ್ವಾತಂತ್ರ್ಯ ನೀಡಲಾಗಿತ್ತು.

ಸ್ವತಂತ್ರ ದೇಶದ ಮನ್ನಣೆ ಮಸೂದೆ

ಚೀನಾದ ಭಾಗವಾಗಿರುವ ಸ್ವಾಯತ್ತ ಟಿಬೆಟ್ ಮತ್ತು ಹಾಂಕಾಂಗ್​ಗಳನ್ನು ಸ್ವತಂತ್ರ ದೇಶವೆಂದು ಮನ್ನಣೆ ನೀಡುವ ಎರಡು ಮಸೂದೆ ಕಾಂಗ್ರೆಸ್​ನಲ್ಲಿ (ಸಂಸತ್) ಮಂಡನೆಯಾಗಿದೆ. ಇದರಿಂದ ಚೀನಾ ಕಣ್ಣು ಕೆಂಪಗಾಗಿದೆ.