ನ್ಯೂಸ್

ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರ ಸೆರೆ

ಮಂಜುನಾಥ.ಕೆ

ಬೆಂಗಳೂರು: ವ್ಹೀಲಿಂಗ್ ಮಾಡಲು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಪದವಿ ವಿದ್ಯಾರ್ಥಿ ಸೇರಿ ಇಬ್ಬರು ಆರೋಪಿಗಳನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೊಮ್ಮಲೂರಿನ ಬಿಡಿಎ ಕ್ವಾಟ್ರರ್ಸ್ ನಿವಾಸಿ ರಿತೀಕ್(೧೯) ಮತ್ತು ನೀಲಸಂದ್ರ ನಿವಾಸಿ ಪವನ್(೧೯) ಬಂಧಿತರು. ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ಮೂರು ಯಮಹಾ ಬೈಕ್ ಹಾಗೂ ಒಂದು ಡಿಯೋ ಸ್ಕೂಟರ್ ಅನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ಪೈಕಿ ರಿತೀಕ್ ಗ್ಯಾರೆಜ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಪವನ್ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ. ಆರೋಪಿಗಳು ಇತ್ತೀಚೆಗೆ ಠಾಣೆ ವ್ಯಾಪ್ತಿಯ ಹರೇಕೃಷ್ಣ ರಸ್ತೆಯಲ್ಲಿ ಯಮಹಾ ಬೈಕ್ ಕದ್ದು ವ್ಹೀಲಿಂಗ್‌ಮಾಡುತ್ತಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವ್ಹೀಲಿಂಗ್ ವಿಡಿಯೋ ಹರಿಬಿಟ್ಟಿದ್ದರು:
ಯಮಹಾ ಬೈಕ್ ಕಳವು ಮಾಡುತ್ತಿದ್ದ ಆರೋಪಿಗಳು, ತಿಂಗಳುಗಟ್ಟಲೇ ವ್ಹೀಲಿಂಗ್ ಮಾಡುತ್ತಿದ್ದರು. ಒಂದು ವೇಳೆ ಅದು ಕೆಟ್ಟು ಹೋದರೆ, ನಿರ್ಜನ ಪ್ರದೇಶ ಅಥವಾ ಯಾವುದಾದರೂ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗುತ್ತಿದ್ದರು. ಯಮಹಾ ಬೈಕ್ ಸಿಗದಿದ್ದರೆ ಡಿಯೋ ಬೈಕ್ ಕಳವು ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ. ಕೇವಲ ಲೈಕ್ಸ್, ಕಾಮೆಂಟ್ಸ್ ಗಳಿಸುವ ಹುಚ್ಚಿಗೆ ಬಿದ್ದು ದ್ವಿಚಕ್ರ ವಾಹನಗಳನ್ನು ಕದ್ದು ಅದರಲ್ಲಿ ವ್ಹೀಲಿಂಗ್ ಮತ್ತು ಅಪಾಯಕಾರಿ ರೇಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಇತ್ತೀಚೆಗೆ ಇದೇ ರೀತಿ ಕದ್ದ ಯಮಹಾ ಬೈಕ್‌ನಲ್ಲಿ ವ್ಹೀಲಿಂಗ್‌ಮಾಡಿ, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಿದಾಗ ಬೇರೆಡೆ ಬೈಕ್‌ಗಳ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.