ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಬಸ್‌ಗಳಲ್ಲಿ ಪ್ರಯಾಣಿಕರ ಲ್ಯಾಪ್‌ಟಾಪ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶಿವಾಜಿನಗರ ನಿವಾಸಿ ಕೆ.ಆರ್.ಶಬರೀಶ್(೩೨) ಮತ್ತು ಸೋಮೇಶ್ವರನಗರದ ಅರೆಕೆಂಪನಹಳ್ಳಿ ನಿವಾಸಿ ಜಿಲ್ ಪಾಷಾ(೨೯) ಬಂಧಿತರು. ಆರೋಪಿಗಳಿಂದ ೯ ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ ೩೯ ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಆಂಧ್ರಪ್ರದೇಶದ ಸಾರಿಗೆ ಬಸ್‌ನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಕೆ.ವಿ.ಸುಬ್ಬಾರೆಡ್ಡಿ ಎಂಬುವವರ ಲ್ಯಾಪ್‌ಟಾಪ್ ಕಳುವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿ ಕೆ.ಆರ್.ಶಬರೀಶ್ ರಾತ್ರಿ ವೇಳೆ ಆಂಧ್ರಪ್ರದೇಶದಿಂದ ಬೆಂಗಳೂರು ಹಾಗೂ ಬೆಂಗಳೂರಿನಿಂದ ಆಂಧ್ರಪ್ರದೇಶಕ್ಕೆ ತೆರಳುವ ಬಸ್‌ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಪ್ರಯಾಣಿಸುತ್ತಿದ್ದ. ಈ ವೇಳೆ ಲ್ಯಾಪ್‌ಟಾಪ್ ಬ್ಯಾಗ್ ಇರುವ ಪ್ರಯಾಣಿಕರನ್ನು ಗಮನಿಸುತ್ತಿದ್ದ. ಪ್ರಯಾಣಿಕರು ಗಾಢ ನಿದ್ದೆಯಲ್ಲಿ ಇದ್ದಾಗ ಲ್ಯಾಪ್‌ಟಾಪ್ ಬ್ಯಾಗ್ ಎಗರಿಸಿ ಮಾರ್ಗ ಮಧ್ಯೆಯೇ ಇಳಿದು ಪರಾರಿಯಾಗುತ್ತಿದ್ದ. ಕದ್ದ ಲ್ಯಾಪ್‌ಟಾಪ್‌ಗಳನ್ನು ಬೆಂಗಳೂರಿನ ಜಿಲ್ ಮೂಲಕ ವಿಲೇವಾರಿ ಮಾಡಿಸಿ ಹಣ ಪಡೆಯುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಆರೋಪಿಗಳ ಬಂಧನದಿಂದ ಕೊಡಿಗೇಹಳ್ಳಿ ಮತ್ತು ಉಪ್ಪಾರಪೇಟೆ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಲ್ಯಾಪ್‌ಟಾಪ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.