ಒಂದೇ ಮೊಟ್ಟೆಯೊಳಗೆ ಎರಡು ಹಳದಿ ಭಾಗಗಳಿರುವ ಡಬಲ್ ಯೋಕ್ ಎಗ್​ 
ನ್ಯೂಸ್

ಒಂದೇ ಮೊಟ್ಟೆಯಲ್ಲಿ ಎರಡು ಹಳದಿ ಭಾಗ! ಇದು ಹೇಗೆ ಸಾಧ್ಯ? ತಿನ್ನಬಹುದಾ? | Double Yolk Egg

Double Yolk Egg: ಸಾಮಾನ್ಯವಾಗಿ ಮೊಟ್ಟೆ ಒಡೆದಾಗ ಒಂದು ಹಳದಿ ಭಾಗ ಕಾಣಿಸಿಕೊಳ್ಳುವುದು ಸಹಜ. ಆದರೆ ಕೆಲವೊಮ್ಮೆ ಒಂದೇ ಮೊಟ್ಟೆಯೊಳಗೆ ಎರಡು ಹಳದಿ ಭಾಗಗಳು ಕಂಡುಬಂದರೆ ಅಚ್ಚರಿ ಆಗುವುದು ಖಂಡಿತ. ಇಂತಹ ಮೊಟ್ಟೆಯನ್ನು ಡಬಲ್ ಯೋಕ್ ಎಗ್ ಎಂದು ಕರೆಯಲಾಗುತ್ತೆ. ಇದು ಯಾವುದೇ ಕೃತಕ ಪ್ರಕ್ರಿಯೆಯ ಫಲಿತಾಂಶವಲ್ಲ. ಕೋಳಿಯ ದೇಹದಲ್ಲಿ ನಡೆಯುವ ಸಹಜ ಜೈವಿಕವಾಗಿ ಉಂಟಾಗುವ ಅಪರೂಪದ ವಿದ್ಯಮಾನ.

ಒಂದು ಮೊಟ್ಟೆಯಲ್ಲಿ ಎರಡು ಹಳದಿ ಭಾಗ ಹೇಗೆ ಬರುತ್ತೆ?

ಸಾಮಾನ್ಯವಾಗಿ ಕೋಳಿಯ ಅಂಡಾಶಯದಿಂದ ಸುಮಾರು 24ರಿಂದ 26 ಗಂಟೆಗಳಿಗೊಮ್ಮೆ ಒಂದು ಹಳದಿ ಭಾಗ ಬಿಡುಗಡೆಯಾಗುತ್ತದೆ. ಆದರೆ ಕೆಲವೊಮ್ಮೆ ಹಾರ್ಮೋನುಗಳ ವ್ಯತ್ಯಾಸದಿಂದ ಒಂದೇ ಸಮಯದಲ್ಲಿ ಅಥವಾ ಕಡಿಮೆ ಅಂತರದಲ್ಲಿ ಎರಡು ಹಳದಿ ಭಾಗಗಳು ಬಿಡುಗಡೆಯಾಗುತ್ತವೆ. ಇವೆರಡೂ ಕೋಳಿಯ ಗರ್ಭನಾಳದ ಮೂಲಕ ಸಾಗುವಾಗ ಸುತ್ತಲೂ ಬಿಳಿ ಭಾಗ ಮತ್ತು ಒಂದೇ ಚಿಪ್ಪು ರೂಪುಗೊಳ್ಳುತ್ತದೆ. ಹೀಗಾಗಿ ಒಂದೇ ಮೊಟ್ಟೆಯೊಳಗೆ ಎರಡು ಹಳದಿ ಭಾಗಗಳು ಕಾಣಿಸಿಕೊಳ್ಳುತ್ತವೆ.

ಯಾವ ಕೋಳಿಗಳಲ್ಲಿ ಹೆಚ್ಚು ಕಂಡುಬರುತ್ತೆ?

ಮೊಟ್ಟೆ ಇಡಲು ಹೊಸದಾಗಿ ಆರಂಭಿಸಿರುವ ಎಳೆಯ ಕೋಳಿಗಳಲ್ಲಿ ಇಂತಹ ಮೊಟ್ಟೆಗಳು ಹೆಚ್ಚಾಗಿ ಕಂಡುಬರುತ್ತವೆ. ಅವುಗಳ ಸಂತಾನೋತ್ಪತ್ತಿ ವ್ಯವಸ್ಥೆ ಇನ್ನೂ ಹೊಂದಿಕೊಳ್ಳುತ್ತಿರುವುದರಿಂದ ಹಾರ್ಮೋನುಗಳ ಬದಲಾವಣೆಯಿಂದ ಎರಡು ಹಳದಿ ಭಾಗಗಳು ಬಿಡುಗಡೆಯಾಗಬಹುದು. ಕೆಲವು ಕೋಳಿಗಳಲ್ಲಿ ಅನುವಂಶಿಕ ಕಾರಣಗಳಿಂದಲೂ ಡಬಲ್ ಯೋಕ್ ಮೊಟ್ಟೆ ಇಡುವ ಸಾಧ್ಯತೆ ಹೆಚ್ಚಿರುತ್ತದೆ.

ಡಬಲ್ ಯೋಕ್ ಮೊಟ್ಟೆ ತಿನ್ನಬಹುದಾ?

ಒಂದೇ ಮೊಟ್ಟೆಯಲ್ಲಿ ಎರಡು ಹಳದಿ ಭಾಗಗಳಿರುವುದು ಯಾವುದೇ ರೋಗ ಅಥವಾ ರಾಸಾಯನಿಕದ ಪರಿಣಾಮವಲ್ಲ. ಮೊಟ್ಟೆ ತಾಜಾವಾಗಿದ್ದು, ಸರಿಯಾಗಿ ಸಂಗ್ರಹಿಸಿ ಬೇಯಿಸಿದ್ದರೆ ತಿನ್ನಲು ಸುರಕ್ಷಿತವಾಗಿದೆ. ಎರಡು ಹಳದಿ ಭಾಗಗಳಿರುವುದರಿಂದ ಸಾಮಾನ್ಯ ಮೊಟ್ಟೆಗಿಂತ ಕೆಲವು ಪೋಷಕಾಂಶಗಳ ಪ್ರಮಾಣ ಹೆಚ್ಚಿರಬಹುದು.

ಇದರಿಂದ ಎರಡು ಮರಿಗಳು ಹುಟ್ಟುತ್ತವೆಯೇ?

ಒಂದೇ ಮೊಟ್ಟೆಯೊಳಗೆ ಎರಡು ಹಳದಿ ಭಾಗಗಳಿರುವುದರಿಂದ ಎರಡು ಮರಿಗಳು ಹುಟ್ಟುತ್ತವೆ ಎಂದು ಹೇಳಲಾಗುವುದಿಲ್ಲ. ಎರಡೂ ಹಳದಿ ಭಾಗಗಳಲ್ಲಿ ಭ್ರೂಣ ಬೆಳವಣಿಗೆಯಾದರೂ, ಒಂದೇ ಚಿಪ್ಪಿನೊಳಗೆ ಎರಡು ಮರಿಗಳಿಗೆ ಅಗತ್ಯವಾದ ಸ್ಥಳ ಮತ್ತು ಆಮ್ಲಜನಕದ ಕೊರತೆಯಿಂದ ಮೊಟ್ಟೆಯಿಂದ ಹೊರಬರುವ ಸಾಧ್ಯತೆ ತೀರಾ ಕಡಿಮೆ.

ಇದನ್ನೂ ಓದಿ: ಬೈಕ್ ಎದುರು ದಿಢೀರ್ ಕಾಡಾನೆ ಪ್ರತ್ಯಕ್ಷ; ಹೆದರಿ ಕೆಳಗೆ ಬಿದ್ದ ಮಹಿಳೆ, ಮುಂದೇನಾಯ್ತು? | Assam Elephant

ಹೀಗಾಗಿ ಮೊಟ್ಟೆಯಲ್ಲಿ ಎರಡು ಹಳದಿ ಭಾಗ ಕಾಣಿಸಿಕೊಂಡರೆ ಅದು ಅಪರೂಪದ ಸಂಗತಿಯಾದರೂ, ಸಹಜ ಜೈವಿಕ ಪ್ರಕ್ರಿಯೆಯೇ ಹೊರತು ಆತಂಕಪಡುವ ಅಗತ್ಯವಿಲ್ಲ.