ಕಾಪು ತಾಲೂಕಿನ ಅಡ್ವೆಯಲ್ಲಿ ಋಗ್ವೇದ ಸಂಹಿತಾ ಯಾಗ ಪೂರ್ಣಾಹುತಿ ಶುಕ್ರವಾರ ನಡೆಯಿತು. 
ನ್ಯೂಸ್

ಪ್ರಧಾನಿ, ದೇಶಕ್ಕಾಗಿ ಎರಡು ವರ್ಷ ನಿತ್ಯ ಯಾಗ ಸಂಪನ್ನ

ಉಡುಪಿ/ಪಡುಬಿದ್ರಿ: ಕಾಪು ತಾಲೂಕಿನ ಅಡ್ವೆಯಲ್ಲಿ ಪಲಿಮಾರು ಮಠದ ಯೋಗದೀಪಿಕಾ ಗುರುಕುಲದ ಪ್ರಾಚಾರ್ಯ ವಿದ್ವಾನ್ ಅಡ್ವೆ ಲಕ್ಷ್ಮೀಶಾಚಾರ್ಯ ಅವರು ಎರಡು ವರ್ಷಗಳಿಂದ ಕರೊನಾ ವಿಪತ್ತಿನ ಸಂದರ್ಭ ದೇಶದ ಒಳಿತಿಗಾಗಿ ಪ್ರಾರ್ಥಿಸಿ, ಪ್ರಧಾನಿ ಮೋದಿ ಹೆಸರು ಮತ್ತು ನಕ್ಷತ್ರದಲ್ಲಿ ಸಂಕಲ್ಪದೊಂದಿಗೆ 10 ಬಾರಿ ನಡೆಸಿದ ಸಂಪೂರ್ಣ ಋಗ್ವೇದ ಸಂಹಿತಾ ಯಾಗ ಶುಕ್ರವಾರ ಸಂಪನ್ನಗೊಂಡಿತು.

ಲಕ್ಷ್ಮೀಶಾಚಾರ್ಯರು ಪ್ರಸ್ತುತ ದೇಶದಲ್ಲಿರುವ ಬೆರಳೆಣಿಕೆ ಅಗ್ನಿಹೋತ್ರಿಗಳಲ್ಲಿ ಒಬ್ಬರಾಗಿದ್ದು, ಪ್ರತಿನಿತ್ಯ ಮೂರು ಹೊತ್ತು ಅಗ್ನಿಯ ಉಪಾಸನೆ ಮಾಡುತ್ತಿದ್ದಾರೆ. ಸೀಮಿತ ಆದಾಯ ಹೊಂದಿದ್ದರೂ ಬಹುಪಾಲು ಹಣ ಲೋಕವಿಹಿತ ವೈದಿಕ ಕರ್ತವ್ಯಗಳಿಗೆ ವಿನಿಯೋಗಿಸುತ್ತಿರುವುದು ನಿಸ್ಪ ೃ ರಾಷ್ಟ್ರಭಕ್ತಿಗೆ ಸಾಕ್ಷಿ.

ಲಕ್ಷ್ಮೀಶಾಚಾರ್ಯರು ಜಿಲ್ಲೆಯ ಹತ್ತು ವಿದ್ಯಾರ್ಥಿಗಳಿಗೆ ನಿರಂತರವಾಗಿ ಮೂರು ವರ್ಷ ನಡೆಸಿದ ವೇದ ಪಾಠದ ಮಂಗಳೋತ್ಸವವೂ ಇದೇ ಸಂದರ್ಭ ನಡೆಯಿತು. ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಇತರರು ಭಾಗವಹಿಸಿದ್ದರು.

ವೇದ ತಿಳಿದವರು ಮಾತ್ರ ಪರಬ್ರಹ್ಮನನ್ನು ತಿಳಿಯಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ವೇದಾಧ್ಯಯನಕ್ಕೆ ಆಸಕ್ತಿ ವಹಿಸಿದ್ದಾರೆ. ಋಕ್ ಸಂಹಿತಾ ಯಾಗದಿಂದ ದೇಶ ಸುಭಿಕ್ಷವಾಗಲಿ. | ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ಮಠ, ಉಡುಪಿ ಹಿಂದು ಧರ್ಮ, ಸಂಸ್ಕೃತಿ ಪುನರುತ್ಥಾನ ಪ್ರಧಾನಿ ಮೋದಿ ಅವರಿಂದ ಸಾಧ್ಯ. ಅವರಿಗೆ ದೇವರು ದೀರ್ಘಾಯುಷ್ಯ, ಆರೋಗ್ಯ ನೀಡಬೇಕು. ಲಕ್ಷ್ಮೀಶಾಚಾರ್ಯರು 10 ಬಾರಿ ಮಾಡಿದ ಋಕ್ ಸಂಹಿತಾ ಯಾಗದ ಪುಣ್ಯಫಲವನ್ನು ಪ್ರಧಾನಿ ಯವರ ಹೆಸರಿಗೆ ಜಮೆ ಮಾಡಿದ್ದಾರೆ. ಈ ಪುಣ್ಯದಿಂದ ಅನೇಕ ವರ್ಷ ದೇಶವನ್ನು ಚೆನ್ನಾಗಿ ಆಳುವಂತಾಗಲಿ. | ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಪಲಿಮಾರು ಮಠ, ಉಡುಪಿ