ನವದೆಹಲಿ: ಸದಾ ಒಂದಿಲ್ಲೊಂದು ಕಾರಣಕ್ಕೆ ರಾಷ್ಟರಾಜಧಾನಿ ನವದೆಹಲಿಯ ಜೀವನಾಡಿ ಮೆಟ್ರೋ (Metro) ಸುದ್ದಿಯಲ್ಲಿರುತ್ತದೆ. ಪ್ರೇಮಿಗಳ ಅಸಭ್ಯ ವರ್ತನೆ, ರೀಲ್ಸ್ಗಾಗಿ ಹುಚ್ಚಾಟ ಹಾಗೂ ಸೀಟಿಗಾಗಿ ಪ್ರಯಾಣಿಕರು ಸದಾ ಕಿತ್ತಾಡಿರುವ ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ಆಗಿಂದಾಗೆ ನೋಡುತ್ತಿರುತ್ತೇವೆ. ಇದೀಗ ಸೀಟಿಗಾಗಿ ಮಹಿಳೆಯರಿಬ್ಬರು ಕಿತ್ತಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಸೀಟಿಗಾಗಿ ಇಬ್ಬರು ಮಹಿಳೆಯರು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿತ್ತಾಡಿಕೊಂಡಿದ್ದು, ಹೊಡೆದಾಡಿಕೊಂಡಿದ್ದಾರೆ. ಇದನ್ನು ರೈಲಿನಲ್ಲಿದ್ದ (Metro) ಸಹ ಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ.
Delhi.connection ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸೀಟಿನಲ್ಲಿ ಕುಳಿತುಕೊಂಡಿರುವ ಮಹಿಳೆ ಹಾಗೂ ಆಕೆಯ ಪಕ್ಕ ನಿಂತಿರುವ ಸಹ ಪ್ರಯಾಣಿಕರೊಬ್ಬರ ನಡುವೆ ಮಾತಿನ ಚಕಮಕಿ ಶುರುವಾಗುತ್ತದೆ. ಇಬ್ಬರ ನಡುವಿನ ಮಾತು ಜೋರಾಗುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಜುಟ್ಟು ಹಿಡಿದುಕೊಂಡು ಹೊಡೆದಾಡಲು ಶುರು ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ದೆಹಲಿ ಮೆಟ್ರೋದಲ್ಲಿ (Metro) ಈ ರೀತಿ ಜಗಳವಾಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಅನೇಕ ಬಾರಿ ಈ ರೀತಿ ಗಲಾಟೆಗಳಾಗಿದ್ದು, ಕೆಲ ದಿನಗಳ ಹಿಂದೆ ಇಬ್ಬರು ಮಹಿಳೆಯರು ಕಿತ್ತಾಡಿಕೊಂಡು ತಳ್ಳಾಡಿಕೊಂಡಿದ್ದರು. ಇದಲ್ಲದೆ ಇಬ್ಬರು ವ್ಯಕ್ತಿಗಳು ಸೀಟಿನ ವಿಚಾರವಾಗಿ ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿದ್ದರು ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಖತ್ ವೈರಲ್ ಆಗಿತ್ತು.