ಗಾಂಧಿಬಜಾರ್ ಜ್ಯುವೆಲರಿ ಶಾಪ್‌ನಲ್ಲಿ ಚಿನ್ನದ ಸರ ಎಗರಿಸಿದ ಮಹಿಳೆಯರು. 
ನ್ಯೂಸ್

ಬುರ್ಖ ಧರಿಸಿ ಚಿನ್ನದ ಸರ ಕಳವಿಗೆ ಯತ್ನ, ಮಹಿಳೆಯರಿಬ್ಬರ ಸೆರೆ

ಶಿವಮೊಗ್ಗ: ಗಾಂಧಿಬಜಾರ್‌ನ ಬಂಗಾರದಂಗಡಿಗೆ ಬುರ್ಖ ಧರಿಸಿ ಬಂದಿದ್ದ ಇಬ್ಬರು ಮಹಿಳೆಯರು ನಕಲಿ ಬಂಗಾರದ ಸರವನ್ನಿಟ್ಟು 15 ಗ್ರಾಂ ಅಸಲಿ ಚಿನ್ನದ ಸರ ಕಳವಿಗೆ ಯತ್ನಿಸಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಮಯ ಪ್ರಜ್ಞೆ ಮೆರೆದ ಮಾಲೀಕರೇ ಇಬ್ಬರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರ್‌ಎಂಎಲ್‌ನಗರದ ನಿಗರ್ ಸುಲ್ತಾನ್ ಮತ್ತು ನೂರೈನ್ ಪರಿ ಬಂಧಿತರು. ಮಂಗಳವಾರ ಗಾಂಧಿಬಜಾರ್‌ನ ಕಿರಣ್ ಶಾ ಮಾಲೀಕ್ವತದ ಜ್ಯುವೆಲ್ಲರಿ ಶಾಪ್‌ಗೆ ಬಂದಿದ್ದ ಇಬ್ಬರು ಚಿನ್ನ ಖರೀದಿಸುವುದಾಗಿ ಹೇಳಿದ್ದರು. ಶಾಪ್‌ನಲ್ಲಿದ್ದ ನೌಕರನೊಬ್ಬ ಟ್ರೇನಲಿದ್ದ ಚಿನ್ನದ ಸರಗಳನ್ನು ತೋರಿಸಿದ್ದರು. ಈ ವೇಳೆ ಚಿನ್ನದ ಸರಗಳನ್ನು ವೀಕ್ಷಿಸುತ್ತಿದ್ದ ಮಹಿಳೆಯರು 15 ಗ್ರಾಂ ಚಿನ್ನದ ಸರವನ್ನು ಎಗರಿಸಲು ಮುಂದಾಗಿ ಸಿಕ್ಕುಬಿದ್ದಿದ್ದಾರೆ.

ಟ್ಯಾಗ್ ಮಾಡಿದ್ದ ಚಿನ್ನದ ಸರವನ್ನು ಬದಲಿಸಿದ ಮಹಿಳೆಯರು ಅಲ್ಲಿಂದ ಹೊರಡಲು ಮುಂದಾಗಿದ್ದರು. ಈ ವೇಳೆ ಮಾಲೀಕರು ವಿಳಾಸ ಕೇಳಿದ್ದು ಆರ್‌ಎಂಎಲ್‌ನಗರ ಎಂದು ಹೇಳಿ ಅಲ್ಲಿಂದ ಹೊರಟುಹೋಗಿದ್ದರು. ತಕ್ಷಣವೇ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಮಾಲೀಕರು, ಸರ ಕಳ್ಳತನ ಆಗಿರುವುದನ್ನು ದೃಢಪಡಿಸಿಕೊಂಡು 112ಗೆ ಕರೆ ಮಾಡಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ತಪಸಣೆ ನಡೆಸಿದಾಗ ಸರ ಕಳ್ಳತನ ಆಗಿರುವುದು ದೃಢಪಟ್ಟಿದೆ. ಈ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.