ಬೆಂಗಳೂರು: ವಿದೇಶದಿಂದ ವನ್ಯಜೀವಿಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿಗಳಿಂದ ಜಪ್ತಿ ಮಾಡಲಾದ ಎರಡು ಟ್ರಾಲಿ ಬ್ಯಾಗ್‌ಗಳ ಪೈಕಿ ಒಂದರಲ್ಲಿ 24 ವನ್ಯಜೀವಿಗಳು, ಮತ್ತೊಂದರಲ್ಲಿ 16 ಸೇರಿ 40 ವನ್ಯಜೀವಿಗಳನ್ನು ಸಂರಕ್ಷಣೆ ಮಾಡಲಾಗಿದೆ. ಕೆಂಪು ಕಾಲಿನ ಆಮೆಗಳು, ದೈತ್ಯ ಆಮೆಗಳು, ಮಣಿ ಹಲ್ಲಿಗಳು, ಆಲ್ಬಿನೋ ಬಾವಲಿಗಳು, ಅಮೆರಿಕನ್ ಮೊಸಳೆ ಮರಿಗಳು ಇತ್ಯಾದಿ ಇವೆ.
ನ. 11ರ ರಾತ್ರಿ 11 ಗಂಟೆಗೆ ಕೌಲಾಲಂಪುರದಿಂದ ಟರ್ಮಿನಲ್-2ಗೆ ಬಂದಿದ್ದ ವಿಮಾನದಲ್ಲಿನ ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಇಬ್ಬರು ಪ್ರಯಾಣಿಕರ ಟ್ರಾಲಿ ಬ್ಯಾಗ್‌ನಲ್ಲಿ ಶಬ್ದವಾಗಿತ್ತು. ಕೂಡಲೇ ಆ ಬ್ಯಾಗ್‌ಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ವನ್ಯಜೀವಿಗಳು ಇರುವುದು ಕಂಡುಬಂದಿದೆ. ಇಬ್ಬರು ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಕಸ್ಟಮ್ಸ್ ಕಾಯ್ದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.