ನ್ಯೂಸ್

ದ್ವಿಚಕ್ರ ವಾಹನ ಕಳ್ಳನ ಬಂಧನ

ಮಂಜುನಾಥ.ಕೆ


ಬೆಂಗಳೂರು : ಮೋಜಿನ ಜೀವನ ನಡೆಸುವ ಸಲುವಾಗಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಂದಿನಿ ಲೇಔಟ್‌ನ ಪವನ್ ಕುಮಾರ್(೨೭) ಬಂಧಿತ. ಆರೋಪಿ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ೩ ಲಕ್ಷ ರೂ. ಮೌಲ್ಯದ ೭ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಲಗ್ಗೆರೆಯ ಚೌಡೇಶ್ವರಿನಗರದಲ್ಲಿ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಪವನ್ ಕುಮಾರ್ ವೃತ್ತಿಪರ ಕಳ್ಳನಾಗಿದ್ದು, ಈ ಹಿಂದೆ ಬೇಗೂರು, ಜಿಗಣಿ, ನೆಲಮಂಗಲ ಟೌನ್, ರಾಜಗೋಪಾಲನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳನ್ನು ಕದ್ದು ಜೈಲು ಸೇರಿದ್ದ. ಜಾಮೀನು ಪಡೆದು ಹೊರಬಂದ ಬಳಿಕವೂ ತನ್ನ ಕಳ್ಳತನ ಚಾಳಿ ಮುಂದುವರಿಸಿದ್ದ. ಆರೋಪಿಯ ಬಂಧನದಿಂದ ನಂದಿನಿ ಲೇಔಟ್, ಕೊತ್ತನೂರು, ಎಚ್‌ಎಸ್‌ಆರ್ ಲೇಔಟ್, ಅನ್ನಪೂರ್ಣೇಶ್ವರಿನಗರ, ಬಾಗಲಗುಂಟೆ, ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ೭ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.
ಆರೋಪಿ ಪವನ್‌ಗೆ ನಿರ್ದಿಷ್ಟ ಕೆಲಸವಿರಲಿಲ್ಲ. ಸುಲಭವಾಗಿ ಹಣ ಹೊಂದಿಸಲು ದ್ವಿಚಕ್ರ ವಾಹನ ಕಳ್ಳತನಕ್ಕೆ ಇಳಿದಿದ್ದ. ರಾತ್ರಿ ವೇಳೆ ಮನೆ ಎದುರು ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಗುರಿಯಾಗಿಸಿಕೊಂಡು ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದ. ಕದ್ದ ದ್ವಿಚಕ್ರ ವಾಹನಗಳನ್ನು ಪರಿಚಿತ ಮುಖಾಂತರ ವಿಲೇವಾರಿ ಮಾಡಿಸಿ ಬಂದ ಹಣದಿಂದ ಮಜಾ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.