ನಂಜನಗೂಡು : ಮಧ್ಯರಾತ್ರಿ ಬಾರ್‌ಗೆ ಬಂದ ಕಿಡಿಗೇಡಿ ಯುವಕರ ಗುಂಪೊಂದು ಕ್ಯಾಷಿಯರ್‌ಗೆ ಬೆದರಿಕೆ ಹಾಕಿ ಬಲವಂತವಾಗಿ ಬಾರ್ ತೆಗೆಸಿ ಬಿಯರ್ ಬಾಟಲ್ ಕೇಸ್ ಹೊತ್ತೊಯ್ದಿದ್ದ ಏಳು ಪುಂಡರ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಪಟ್ಟಣ ನಿವಾಸಿಗಳಾದ ಕಿಶೋರ್, ಚಂದನ್ ಬಂಧಿತರು. ಹುಲ್ಲಹಳ್ಳಿಯಲ್ಲಿರುವ ನ್ಯೂ ಕಾರವಾನ್ ಬಾರ್‌ನಲ್ಲಿ ಇತ್ತೀಚೆ ಘಟನೆ ನಡೆದಿದ್ದು, ಈ ಸಂಬಂದ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಧ್ಯರಾತ್ರಿ ಬಾರ್ ಮುಚ್ಚಿ ಲೆಕ್ಕ ಮಾಡಿಕೊಳ್ಳುತ್ತಿದ್ದ ವೇಳೆ ಹಾಗೂ 5 ಜನ ಕಿಡಿಗೇಡಿಗಳು ಬಂದು ಬಾಗಿಲ ಬಳಿ ನಿಂತು ಅವಾಚ್ಯ ಶಬ್ದಗಳಿಂದ ನಿಂದಿಸಿ ಬಲವಂತವಾಗಿ ಶಟರ್ ತೆಗೆದು ಒಳಗೆ ಪ್ರವೇಶಿಸಿದ್ದಾರೆ. ಕ್ಯಾಷ್‌ಬಾಕ್ಸ್ ಮೇಲೆ ಕುಳಿತು ಬೆದರಿಕೆ ಹಾಕುತ್ತಾ ಬೆದರಿಸಿ ಬಿಯರ್ ಹಾಗೂ ವಿಸ್ಕಿ ಬಾಟಲ್‌ಗಳನ್ನ ಬಾಕ್ಸ್‌ವೊಂದಕ್ಕೆ ತುಂಬಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಕ್ಯಾಶಿಯರ್ ವೆಂಕಟೇಶ್ ಪುಂಡರ ವಿರುದ್ಧ್ದ ಪ್ರಕರಣ ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಹುಲ್ಲಹಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ಚೇತನ್ ಕುಮಾರ್ ಮತ್ತು ಸಿಬ್ಬಂದಿ ಪುಂಡಾಟ ತೋರಿದ ಕಿಶೋರ್ ಹಾಗೂ ಚಂದನ್ ಎಂಬುವರನ್ನು ಶುಕ್ರವಾರ ಬಂಧಿಸಿ ಜೈಲಿಗಟ್ಟಿದ್ದಾರೆ. ಉಳಿದವರ ಪತ್ತೆಗೆ ಬಲೆ ಬೀಸಲಾಗಿದೆ.