ನ್ಯೂಸ್

ಎರಡೆರಡು ಪರಿಹಾರ, ತಪ್ಪಿತಸ್ಥರಿಗೆ ಶಿಕ್ಷೆ

ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ಕೈಗಾರಿಕಾ ಉದ್ದೇಶಕ್ಕೆ ಕೆಐಎಡಿಬಿ ಭೂಸ್ವಾಧೀನ ಮಾಡಿದಾಗ ಎರಡೆರಡು ಬಾರಿ ಪರಿಹಾರ ಪಡೆದ ಭೂ ಮಾಲೀಕರು ಮತ್ತು ಅಧಿಕಾರಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಪರಿಷತ್ತಿನಲ್ಲಿ ಜೆಡಿಎಸ್ ಸದಸ್ಯ ಎಸ್.ಎಸ್ ಭೋಜೇಗೌಡ ಗಮನ ಸೆಳೆಯುವ ಸೂಚನೆಗೆ ಸಚಿವರು ಉತ್ತರಿಸಿದರು.

ಧಾರವಾಡ ಜಿಲ್ಲೆ ಕೆಳಗೇರಿ, ಮುಮ್ಮಿಗಟ್ಟಿ, ಕೋಟೂರು ಮತ್ತು ಬೇಲೂರು ಕೈಗಾರಿಕಾ ಪ್ರದೇಶಗಳಲ್ಲಿ ಹಿಂದಿನ ಸರ್ಕಾರ ಇದ್ದಾಗ ಕೆಲವು ಜಮೀನುಗಳಿಗೆ 2 ಬಾರಿ ಒಟ್ಟಾರೆ 19.99 ಕೋಟಿ ರೂ. ಪರಿಹಾರ ಪಡೆದಿರುವುದು ತನಿಖೆಯಿಂದ ದೃಢಪಟ್ಟಿದೆ. ಅಂದಿನ ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಸಿಬ್ಬಂದಿ ಮೇಲೆ ಪ್ರಕರಣ ದಾಖಲಾಗಿದೆ. ಹಣ ಹಿಂಪಡೆಯುವ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಕೂಡ ತನಿಖೆ ನಡೆಸಿದೆ ಎಂದು ಸಚಿವರು ವಿವರಿಸಿದ್ದಾರೆ.

ರಾಮನಗರ ಜಿಲ್ಲೆಯ ಬನ್ನಿಕುಪ್ಪೆ ಗ್ರಾಮದಲ್ಲೂ 2ನೇ ಬಾರಿ 1.58 ಕೋಟಿ ರೂ. ಪರಿಹಾರ ಪಡೆದಿರುವ ಪ್ರಕರಣದ ಹಿಂದೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಲೋಪವಿದೆ. ಈ ಬಗ್ಗೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಭೂ ಮಾಲೀಕರು 75 ಲಕ್ಷ ರೂ. ಕೋರ್ಟ್‌ನಲ್ಲಿ ಠೇವಣಿ ಇಟ್ಟಿದ್ದಾರೆ. ಅಕ್ರಮದಲ್ಲಿ ಯಾರೇ ಇದ್ದರೂ ಶಿಕ್ಷೆ ಆಗಲಿದೆ ಎಂದು ಭರವಸೆ ನೀಡಿದರು.