ಚಿಕ್ಕಮಗಳೂರು: ನಗರದಲ್ಲಿ ಅನಧಿಕೃತವಾಗಿ ಪ್ಲಾಸ್ಟಿಕ್ ವ್ಯಾಪಾರ ಮಾಡುತ್ತಿದ್ದ 2 ಅಂಗಡಿಗಳ ಮೇಲೆ ನಗರಸಭೆಯಿಂದ ದಾಳಿ ನಡೆಸಿ ದಂಡ ವಿಧಿಸಿ ಅಂಗಡಿಗೆ ಬೀಗ ಹಾಕಲಾಗಿದೆ ಎಂದು ನಗರಸಭೆ ಆಯುಕ್ತ ಬಸವರಾಜ್ ತಿಳಿಸಿದರು.
ನಗರದ ಎಂ.ಜಿ.ರಸ್ತೆಯ ಶರೀಫ್ ಗಲ್ಲಿಯ ಪ್ಲಾಸ್ಟಿಕ್ಸ್ ಅಂಗಡಿಗಳ ಮೇಲೆ ಶುಕ್ರವಾರ ದಾಳಿ ನಡೆಸಿ 200 ಕೆ.ಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು ಅಂಗಡಿಗಳಿಗೆ ಬೀಗ ಹಾಕಲಾಗಿದೆ. ನಗರಸಭೆಯಿಂದ 5 ಅಧಿಕಾರಿಗಳ ತಂಡ ರಚಿಸಿ ಅಂಗಡಿ ಮೇಲೆ ದಾಳಿ ಮಾಡಲಾಗಿದೆ. ನಿಷೇಧಿತ ಪ್ಲಾಸ್ಟಿಕ್ ಪತ್ತೆಯಾದ ಅಂಗಡಿಗಳ ಮಾಲೀಕರಿಗೆ 10 ಸಾವಿರ ರೂ. ದಂಡ ವಿಧಿಸಲಾಗಿದೆ. ಅಂಗಡಿಗಳಿಗೆ ಬೀಗ ಹಾಕಲಾಗಿದೆ ಎಂದರು.
ಸಾರ್ವಜನಿಕರು ನಿಷೇಧಿತ ಪ್ಲಾಸ್ಟಿಕ್ ಬಳಸದೆ ಪರಿಸರ ಉಳಿಸಬೇಕು. ಪ್ಲಾಸ್ಟಿಕ್ ಮಾರಾಟ ಮಾಡಿದ ವರ್ತಕರಿಗೆ ಇಂದು ದಂಡ ವಿಧಿಸಲಾಗಿದೆ. ಮುಂದೆಯೂ ಎಚ್ಚರಗೊಳ್ಳದಿದ್ದರೆ ಪರವಾನಗಿ ರದ್ದು ಮಾಡಿ ಅಂಗಡಿ ಮುಚ್ಚಿಸುತ್ತೇವೆ. ಅಗತ್ಯ ಬಿದ್ದರೆ ಕ್ರಿಮಿನಲ್ ಕೇಸು ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲಾ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಅಧಿಕಾರಿ ರಾಧಾ, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ತೇಜಸ್ವಿನಿ, ಹಿರಿಯ ಆರೋಗ್ಯ ನಿರೀಕ್ಷಕರಾದ ರಂಗಪ್ಪ, ನಾಗಪ್ಪ, ಬಸವರಾಜ್, ಸೂಪರ್‌ವೈಸರ್‌ಗಳಾದ ಮುರುಗೇಶ್, ವಿವೇಕ್ ಇತರರಿದ್ದರು.