ನ್ಯೂಸ್

ಎರಡು ಪ್ರತ್ಯೇಕ ರಸ್ತೆ ಅಪಘಾತ: ದಿನಪತ್ರಿಕೆ ವಿತರಕ, ಮಹಿಳೆ ಸಾವು

ಮಂಜುನಾಥ.ಕೆ

ಬೆಂಗಳೂರು: ನಗರದಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣದಲ್ಲಿ ದಿನಪತ್ರಿಕೆ ವಿತರಕ ಹಾಗೂ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ.

ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ದಿನಪತ್ರಿಕೆ ವಿತರಕ ಮೃತಪಟ್ಟಿರುವ ಘಟನೆ ನೈಸ್ ರಸ್ತೆಯಲ್ಲಿ ನಡೆದಿದೆ.

ಕೂಡ್ಲು ನಿವಾಸಿ ಪ್ರಸನ್ನ(೩೭) ಮೃತಪಟ್ಟವರು. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಪ್ರಸನ್ನ ಕೆಲ ವರ್ಷಗಳಿಂದ ಬೆಂಗಳೂರಿನ ಕೂಡ್ಲು ಸಮೀಪದ ವಿನಾಯಕನಗರದಲ್ಲಿ ವಾಸವಾಗಿದ್ದರು. ದಿನಪತ್ರಿಕೆ ವಿತರಕ ಕೆಲಸ ಮಾಡುತ್ತಿದ್ದರು. ಬುಧವಾರ ರಾತ್ರಿ ೯ಗಂಟೆ ಸುಮಾರಿಗೆ ಕೂಡ್ಲುಗೆ ಹೋಗಲು ತುಮಕೂರು ಕಡೆಯಿಂದ ಹೊಸೂರು ಕಡೆ ಹೋಗಲು ನೈಸ್ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಅತೀವೇಗವಾಗಿ ಬಂದ ಅಪರಿಚಿತ ವಾಹನ ಪ್ರಸನ್ನ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದ ಅವರ ಮೇಲೆಯೇ ವಾಹನದ ಚಕ್ರಗಳು ಹರಿದು ಪ್ರಸನ್ನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೃತ್ಯ ಎಸಗಿದ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಯ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಂಗೇರಿ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.

ಪತ್ನಿ ಸಾವು-ಪತಿಗೆ ಗಾಯ
ಮತ್ತೊಂದು ಪ್ರಕರಣದಲ್ಲಿ ಖಾಸಗಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಪತ್ನಿ ಮೃತಪಟ್ಟು, ಪತಿ ಗಾಯಗೊಂಡಿರುವ ಘಟನೆ ಬನ್ನೇರುಘಟ್ಟ ರಸ್ತೆಯಲ್ಲಿ ನಡೆದಿದೆ.
ಶ್ಯಾನಬೋಗನಹಳ್ಳಿ ನಿವಾಸಿ ಸೆಲ್ವಿ (೪೮) ಮೃತ ಮಹಿಳೆ. ಘಟನೆಯಲ್ಲಿ ಅವರ ಪತಿ ಜೈಶಂಕರ್‌ಗೆ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಕೃತ್ಯ ಎಸಗಿದ ಬಸ್ ಚಾಲಕ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೈಶಂಕರ್ ಮಾರತ್ತಹಳ್ಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಗುರುವಾರ ಬೆಳಗ್ಗೆ ೮ ಗಂಟೆ ಸುಮಾರಿಗೆ ಬಸವನಹಳ್ಳಿಯಿಂದ ಮಾರತ್ತಹಳ್ಳಿ ಕಡೆಗೆ ಟಿವಿಎಸ್ ಎಕ್ಸೆಲ್ ದ್ವಿಚಕ್ರ ವಾಹನದಲ್ಲಿ ಪತ್ನಿ ಸೆಲ್ವಿ ಜತೆ ಹೋಗುತ್ತಿದ್ದರು. ಈ ವೇಳೆ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಅತೀವೇಗವಾಗಿ ಬಂದ ಖಾಸಗಿ ಬಸ್ ಜೈಶಂಕರ್ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಕೆಳಗೆ ಬಿದ್ದ ಸೆಲ್ವಿ ಮೇಲೆಯೇ ಬಸ್‌ನ ಚಕ್ರಗಳು ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಸ್ತೆಯ ಮತ್ತೊಂದು ಬದಿಗೆ ಬಿದ್ದ ಜಯಶಂಕರ್ ಸಹ ಗಾಯಗೊಡಿದ್ದಾರೆ. ಖಾಸಗಿ ಬಸ್ ಚಾಲಕ ಕುಮಾರ್‌ನನ್ನು ಬಂಧಿಸಲಾಗಿದೆ. ಜೈಶಂಕರ್ ದಂಪತಿ ಮಾರತ್ತಹಳ್ಳಿಯಲ್ಲಿರುವ ಪುತ್ರಿ ಮನೆಗೆ ಹೋಗುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹುಳಿಮಾವು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.