ನ್ಯೂಸ್

ಪ್ರಜ್ಞೆ ತಪ್ಪಿಸಿ ಮೈಮೇಲಿದ್ದ ಆಭರಣ ಕದಿಯುತ್ತಿದ್ದ ಇಬ್ಬರ ಸೆರೆ

ಬೆಂಗಳೂರು: ವಯಸ್ಸಾದ ವ್ಯಕ್ತಿಗಳನ್ನು ಗುರಿಯಾಗಿರಿಸಿಕೊಂಡು ಅವರೊಂದಿಗೆ ವಿಶ್ವಾಸದಿಂದ ಮಾತನಾಡಿ ಟೀ ಕೊಡಿಸುವ ನೆಪದಲ್ಲಿ ನಿದ್ದೆ ಮಾತ್ರೆಯನ್ನು ಬೆರೆಸಿ, ಪ್ರಜ್ಞೆ ತಪ್ಪಿಸಿ ಅವರ ಮೈಮೇಲಿರುವ ಚಿನ್ನದ ಓಡವೆಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದ ಇಬ್ಬರನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜಾಜಿನಗರ ನಿವಾಸಿ ಕಾರ್ತಿಕ್(೩೭) ಮತ್ತು ಹೊರಮಾವು ನಿವಾಸಿ ಮಂಜುಶ್ರೀ(೩೨)ಬಂಧಿತರು. ಆರೋಪಿಗಳಿಂದ ೬.೫ ಲಕ್ಷ ರೂ.ಬೆಲೆ ಬಾಳುವ ೧೧೫ ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಕಾರ್ತಿಕ್ ವ್ಯಾಪಾರಿಯೊಬ್ಬರನ್ನು ಪರಿಚಯಿಸಿಕೊಂಡು ಅವರ ಪ್ರಜ್ಜೆ ತಪ್ಪಿಸಿ ಚಿನ್ನಾಭರಣ ಕಳವು ಮಾಡಿದ್ದ ಈ ಸಂಬಂಧ ದಾಖಲಾದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಲ್ಲೇಶ್ವರದ ಹಳ್ಳಿಮನೆ ಹೋಟೆಲ್ ಹತ್ತಿರದಲ್ಲಿ ಜಗನ್ನಾಥ ಗುಪ್ತ ಎಂಬುವವರು ಕಾಂಡಿಮೆಂಟ್ಸ್ ಮತ್ತು ಚಾಟ್ಸ್ ಅಂಗಡಿ ಇಟ್ಟುಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಜಗನ್ನಾಥ ಅವರಿಗೆ ಆರೋಪಿ ಕಾರ್ತಿಕ್ ಪರಿಚಯವಾಗಿ ಅವರ ವಿಶ್ವಾಸ ಗಳಿಸಿದ್ದಾನೆ. ಸೆ.೨೨ರಂದು ಮಧ್ಯಾಹ್ನ ೧೨ ಗಂಟೆಯ ಸಮಯದಲ್ಲಿ ಆರೋಪಿ ಟೀ ಕುಡಿಯುವ ಸಲುವಾಗಿ ಜಗನ್ನಾಥ್ ಗುಪ್ತ ಅವರನ್ನು ಕರೆದುಕೊಂಡು ಅಂಗಡಿಯ ಮುಂಭಾಗದಲ್ಲಿರುವ ಟೀ ಅಂಗಡಿಯ ಪಕ್ಕದ ಕಲ್ಲಿನ ಮೇಲೆ ಕೂರಿಸಿದ್ದಾನೆ. ಆರೋಪಿ ಕಾರ್ತಿಕ್ ಅಂಗಡಿಯಿಂದ ಟೀ ತೆಗೆದುಕೊಂಡು, ಅವರಿಗೆ ಗೊತ್ತಾಗದ ಹಾಗೆ ಒಂದರಲ್ಲಿ ನಿದ್ದೆ ಮಾತ್ರೆಯನ್ನು ಬೆರೆಸಿ ಇಬ್ಬರು ಟೀ ಕುಡಿದಿರುತ್ತಾರೆ. ನಂತರ ಸ್ವಲ್ಪ ಸಮಯದಲ್ಲಿ ಜಗನ್ನಾಥ್ ಗುಪ್ತ ಅವರು ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ. ಆ ಸಮಯದಲ್ಲಿ ಜಗನ್ನಾಥ ಅವರ ಕತ್ತಿನಲ್ಲಿದ್ದ ಸುಮಾರು ೩೫ ಗ್ರಾಂ ತೂಕದ ಡಾಲರ್ ಸಮೇತ ಇದ್ದ ಚಿನ್ನದ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದನು. ಈ ಬಗ್ಗೆ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಕೃತ್ಯ ನಡೆದ ಸ್ಥಳದಲ್ಲಿನ ಹಲವಾರು ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ, ಆರೋಪಿ ಬಗ್ಗೆ ಮಾಹಿತಿ ಸಂಗ್ರಹಿಸಿ, ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದ ಜತೆಗೆ ಮತ್ತೊಂದು ಆರೋಪಿತೆಯ ಬಗ್ಗೆ ಬಾಯ್ಬಿಟ್ಟಿದ್ದ.

ಬೆಳಕಿಗೆ ಬಂದ ಹಲವು ಪ್ರಕರಣಗಳು:
ಆರೋಪಿಯು ಕಳ್ಳತನ ಮಾಡಿದ ಚಿನ್ನದ ಒಡವೆಗಳನ್ನು ಆರೋಪಿತೆ ಮಂಜುಶ್ರೀ ಮೂಲಕ ಮಾರಾಟ ಮಾಡಿಸುತ್ತಿದ್ದುದು ತಿಳಿದು ಬಂದಿದೆ. ಹೀಗಾಗಿ ಆಕೆಯನ್ನು ಬಂಧಿಸಿ ಇಬ್ಬರನ್ನು ಹೆಚ್ಚಿನ ವಿಚಾರಣೆ ನಡೆಸಿದ್ದಾಗ ಆರೋಪಿ ಕಾರ್ತಿಕ್ ಈ ಹಿಂದೆ ಕಾಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಹಾಗೂ ವಿಜಯನಗರದಲ್ಲಿ ನಡೆದಿದ್ದ ಅಪಹರಣ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಬಂಧನಕ್ಕೊಳಗಾಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರ ತಮ್ಮ ಹಳೇ ಚಾಳಿಯನ್ನು ಮುಂದುವರಿಸಿ ಮಲ್ಲೇಶ್ವರದಲ್ಲಿ ವಯಸ್ಸಾದ ವ್ಯಕ್ತಿಗಳನ್ನು ಗುರುತಿಸಿ ಅವರೊಂದಿಗೆ ನಾಲ್ಕೈದು ದಿನ ವಿಶ್ವಾಸ ಗಳಿಸಿ ಟೀ ಕುಡಿಯುವ ನೆಪದಲ್ಲಿ ಅದರಲ್ಲಿ ನಿದ್ದೆ ಮಾತ್ರೆ ಬೆರೆಸಿ ಪ್ರಜ್ಞೆ ತಪ್ಪಿಸಿ ಅವರ ಮೈಮೇಲಿರುವ ಆಭರಣಗಳನ್ನು ಕದ್ದು ಪರಾರಿಯಾಗುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಸಿಪಿ ಎಚ್.ಕೃಷ್ಣಮೂರ್ತಿ ಮತ್ತು ಇನ್‌ಸ್ಪೆಕ್ಟರ್ ಬಿ.ಆರ್.ಜಗದೀಶ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಟವರ್ ಲೋಕೇಶ್ ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.