ಬೆಂಗಳೂರು: ಅತಿವೇಗವಾಗಿ ಚಾಲನೆ ಮಾಡಿದ ಪರಿಣಾಮ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಖಾಸಗಿ ವಿಶ್ವವಿದ್ಯಾಲಯದ ಉಪಕುಲಪತಿ ಪುತ್ರ ಹಾಗೂ ಆತನ ಸ್ನೇಹಿತ ಸ್ಥಳದಲ್ಲೇ ಮೃತಪಟ್ಟಿರುವ ಪ್ರಕರಣ ಯಶವಂತಪುರದಲ್ಲಿ ನಡೆದಿದೆ.
ಸಂಜಯನಗರದ ಆರ್‌ಎಂವಿ 2ನೇ ಹಂತದ ನಿವಾಸಿ ನಿಖಿಲ್(23) ಮತ್ತು ಮನಮೋಹನ್(31) ಮೃತಪಟ್ಟವರು. ಶುಕ್ರವಾರ ಮುಂಜಾನೆ 3.30ರ ಸುಮಾರಿಗೆ ಯಶವಂತಪುರದಿಂದ ಗೊರಗುಂಟೆಪಾಳ್ಯದ ಕಡೆಗೆ ತೆರಳುವ ಮಾರ್ಗ ಮಧ್ಯೆ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ವಿಶ್ವವಿದ್ಯಾಲಯದ ಉಪಕುಲಪತಿ ಧನಂಜಯ ಅವರ ಪುತ್ರ ನಿಖಿಲ್ ಮೃತ ಸವಾರ. ನಗರದ ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ. ಈತನ ಸ್ನೇಹಿತ ಮನಮೋಹನ್ ಖಾಸಗಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಶುಕ್ರವಾರ ನಿಖಿಲ್ ಹುಟ್ಟುಹಬ್ಬವಿತ್ತು. ರಾತ್ರಿ 12 ಗಂಟೆಗೆ ಮನೆಯಲ್ಲಿ ಪಾಲಕರ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ನಿಖಿಲ್ ಎಂ.ಜಿ.ರಸ್ತೆಯಲ್ಲಿ ಸ್ನೇಹಿತರನ್ನು ಭೇಟಿಯಾಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೊರ ಹೋಗಿದ್ದ.
ಹೆಲ್ಮೆಟ್ ಧರಿಸದ ಪರಿಣಾಮ ತಲೆಗೆ ತೀವ್ರ ಪೆಟ್ಟು :
ತನ್ನ ಬಿಎಂಡಬ್ಲ್ಯೂ ಐಷಾರಾಮಿ ದ್ವಿಚಕ್ರ ವಾಹನದಲ್ಲಿ ಸ್ನೇಹಿತ ಮನಮೋಹನ್‌ನನ್ನು ಕರೆದುಕೊಂಡು ಮನೆಯಿಂದ ಹೊರಟಿದ್ದ. ಬಳಿಕ ನಗರದ ವಿವಿಧೆಡೆ ಸುತ್ತಾಡಿ ಶುಕ್ರವಾರ ಮುಂಜಾನೆ 3.20ರ ಸುಮಾರಿಗೆ ಯಶವಂತಪುರ ಕಡೆಯಿಂದ ಗೊರಗುಂಟೆಪಾಳ್ಯದ ಕಡೆಗೆ ಹೋಗುವಾಗ ಬಿಎಸ್‌ಎನ್‌ಎಲ್ ಕಚೇರಿ ಬಳಿಯ ಕೆಂಪೇಗೌಡ ಪ್ರತಿಮೆ ಬಳಿ ತಿರುವು ಪಡೆಯುವಾಗ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸವಾರರಿಬ್ಬರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರು ಹೆಲ್ಮೆಟ್ ಧರಿಸದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸವಾರ ನಿಖಿಲ್ ಮದ್ಯ ಸೇವಿಸಿ ದ್ವಿಚಕ್ರ ವಾಹನ ಚಾಲನೆ ಮಾಡಿರುವ ಬಗ್ಗೆ ಸದ್ಯಕ್ಕೆ ಖಚಿತವಾಗಿಲ್ಲ. ರಕ್ತದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಳಿಕ ಬಳಿಕ ಆ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ. ಮನೆಯಲ್ಲಿ ಎಂ.ಜಿ. ರಸ್ತೆಗೆ ಹೋಗುವುದಾಗಿ ಹೇಳಿದ ನಿಖಿಲ್, ಮುಂಜಾನೆ ಯಶವಂತಪುರ ಕಡೆಯಿಂದ ಗೊರಗುಂಟೆಪಾಳ್ಯದ ಕಡೆಗೆ ಏಕೆ ಹೋಗುತ್ತಿದ್ದ ಎಂಬುದು ಗೊತ್ತಿಲ್ಲ. ಅಪಘಾತದ ಸಂಬಂಧ ಯಶವಂತಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.