ನ್ಯೂಸ್

ರಾಮನಗರ ಜೈಲಿಗೆ ಸ್ಥಳಾಂತರಗೊಂಡಿದ್ದ ಪಾದರಾಯನಪುರ ಪುಂಡರಲ್ಲಿ ಇಬ್ಬರಿಗೆ ಕರೊನಾ ಸೋಂಕು ದೃಢ; ಇನ್ನೆಷ್ಟು ಜನರಲ್ಲಿದೆಯೋ ವೈರಸ್?

ರಾಮನಗರ: ಬೆಂಗಳೂರಿನ ಪಾದರಾಯನಪುರದಲ್ಲಿ ಗಲಭೆ ಮಾಡಿದ್ದ ಸುಮಾರು 121 ಮಂದಿಯನ್ನು ಬಂಧಿಸಿ ರಾಮನಗರ ಜೈಲಿಗೆ ಶಿಫ್ಟ್​ ಮಾಡಲಾಗಿತ್ತು.

ಆದರೆ ಈಗ ಆತಂಕಕಾರಿ ವಿಚಾರವೊಂದು ಹೊರಬಿದ್ದಿದೆ. ಅವರಲ್ಲಿ ಇಬ್ಬರಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿದೆ. ಇಷ್ಟು ದಿನ ಗ್ರೀನ್​ ಝೋನ್​ನಲ್ಲಿದ್ದ ರಾಮನಗರಕ್ಕೆ ಈಗ ಕರೊನಾ ಕಂಟಕ ಎದುರಾಗಿದೆ.

ಪಾದರಾಯನಪುರದಲ್ಲಿ ಕರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಗುರುತಿಸಿ, ಅವರನ್ನು ಕ್ವಾರಂಟೈನ್​ಗೆ ಒಳಪಡಿಸಲು ಹೋದಾಗ ಅಲ್ಲಿನ ಜನರು ಗಲಭೆ ಎಬ್ಬಿಸಿದ್ದರು. ಅರೆಸ್ಟ್ ಮಾಡಿದವರನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡುವ ಸರ್ಕಾರದ ನಿರ್ಧಾರಕ್ಕೆ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದರು.

ಈಗ ಮೊಹಮದ್ ಯಾಸಿನ್ ಹಾಗೂ ಮೊಹಮದ್ ಸಬಾಜ್ ಎಂಬುವರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಇದೀಗ ಇವರಿಬ್ಬರನ್ನೂ ಬೆಂಗಳೂರಿನ ವಿಕ್ಟೋರಿಯಾಕ್ಕೆ ಶಿಫ್ಟ್​ ಮಾಡಲಾಗುತ್ತಿದೆ. ಇನ್ನೂ ಮೂವರಿಗೆ ಸೋಂಕು ತಗುಲಿರುವ ಸಾಧ್ಯತೆ ಇದ್ದು ಅವರನ್ನೂ ಕ್ವಾರಂಟೈನ್​ಗೆ ಒಳಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.