ಮುಸ್ಟೂರು ಗ್ರಾಪಂ ಕಚೇರಿ ಹೊರನೋಟ. 
ನ್ಯೂಸ್

ತ್ರಿಶಂಕು ಸ್ಥಿತಿಯಲ್ಲಿ 60-70 ಪಿಡಿಒಗಳು ; ಕೆಲಸವಿಲ್ಲದೇ ಎರಡು ತಿಂಗಳು ಸಂಬಳ !

Bengaluru - Political - Vilas Melagiri

ಬೆಂಗಳೂರು: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆ ಇನ್ನೂ ಗೊಂದಲದ ಗೂಡಾಗಿಯೇ ಇದೆ. ಸಾರ್ವತ್ರಿಕ ವರ್ಗಾವಣೆ ಮುಗಿದು ತಿಂಗಳುಗಳಾದರೂ ಪಿಡಿಒಗಳು ವಿಲಿವಿಲಿ ಒದ್ದಾಡುತ್ತಿದ್ದಾರೆ. ಸುಮಾರು 700 ಮಂದಿ ವರ್ಗಾವಣೆ ಮಾಡಿದ್ದು, 60-70 ಮಂದಿ ತ್ರಿಶಂಕುಸ್ಥಿತಿಯಲ್ಲಿದ್ದಾರೆ!

ಅನೇಕ ವರ್ಷಗಳಿಂದ ಒಂದೇ ಕಡೆ ಬೀಡುಬಿಟ್ಟಿದ್ದ ಪಿಡಿಒಗಳನ್ನು ಎತ್ತಂಗಡಿ ಮಾಡಿದೆ. ಪಿಡಿಒಗಳನ್ನು ರಾಜ್ಯ ವೃಂದ ಎಂದು ಪರಿಗಣಿಸಿರುವುದರಿಂದ ಎಲ್ಲೆಂದ ಎಲ್ಲೆಲ್ಲಿಗೋ ವರ್ಗ ಮಾಡಲಾಗಿದೆ. ಈ ಮೊದಲು ಆಯಾ ಜಿಲ್ಲೆಗಳನ್ನೇ ಒಂದು ಯುನಿಟ್ ಆಗಿ ಪರಿಗಣಿಸಿ ಸಿಇಒಗಳು ವರ್ಗಾವಣೆ ಮಾಡುತ್ತಿದ್ದರು. ಆದರೆ ಈಗ ರಾಜ್ಯ ವೃಂದವೆಂದು ಪರಿಗಣಿಸಿ ವರ್ಗಾವಣೆ ಮಾಡಿರುವುದರಿಂದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಹಾಕಲಾಗಿದೆ.

ಪಿಡಿಒ ವರ್ಗಾವಣೆಗೆ ಕೌನ್ಸೆಲಿಂಗ್ ಇಲ್ಲದೇ ಇರುವುದರಿಂದ ಸಚಿವರು, ಶಾಸಕರ ಶಿಾರಸು, ದೂರು ಮತ್ತಿತರ ಕಾರಣಗಳನ್ನು ಆಧರಿಸಿ ಅನೇಕ ವರ್ಗಾವಣೆ ನಡೆದಿವೆ. ವರ್ಗಾವಣೆಗೊಂಡವರ ಪೈಕಿ 60-70 ಪಿಡಿಒಗಳಿಗೆ ಸ್ಥಳವನ್ನೇ ತೋರಿಸಿಲ್ಲ. ಈ ಪೈಕಿ ಅನೇಕರು ಯಾವುದೇ ಕೆಲಸವಿಲ್ಲದೆ ಎರಡು ತಿಂಗಳಿಂದ ಸಂಬಳ ಪಡೆಯುತ್ತಿದ್ದಾರೆ!

ಸಾಮಾನ್ಯವಾಗಿ ಐಎಎಸ್, ಐಪಿಎಸ್ ಮತ್ತಿತರ ಮಹತ್ವದ ಹುದ್ದೆಗಳಿಗೆ ವರ್ಗಾವಣೆ ಮಾಡಿದಾಗ ತಾಂತ್ರಿಕ ಮತ್ತಿತರ ಕಾರಣಗಳಿಂದ ಸ್ಥಳ ತೋರಿಸುವುದಿಲ್ಲ. ಆದರೆ ಕೆಳ ಮಟ್ಟದ ಜನರಿಗೆ ಜರೂರಾಗಿ ಕೈಗೆ ಸಿಬೇಕಾದ ಅಧಿಕಾರಿಗಳನ್ನು ಸ್ಥಳ ತೋರಿಸದೇ ವರ್ಗಾವಣೆ ಮಾಡಿರುವುದು ಪಿಡಿಒಗಳ ವಿಚಾರದಲ್ಲಿ ಇದೇ ಮೊದಲು ಎನ್ನಲಾಗಿದೆ.

ಹೊಸ ಸರ್ಕಾರ ಬಂದ ಹಿನ್ನೆಲೆಯಲ್ಲಿ ಶಾಸಕರು, ಸಚಿವರ ಶಿಾರಸಿಗೆ ಮನ್ನಣೆ ನೀಡಿ ಅನೇಕ ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ರಾಜಕೀಯ ದ್ವೇಷವೂ ಸೇರಿದೆ ಎಂಬ ದೂರೂ ಇದೆ. ಸ್ಥಳ ತೋರಿಸದೇ ವರ್ಗಾವಣೆಗೊಂಡವರನ್ನು ಈ ಮೊದಲು ಗ್ರಾಮೀಣಾಭಿವೃದ್ಧಿ ಆಯುಕ್ತರ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ತಿಳಿಸಲಾಗಿತ್ತು. ಬಳಿಕ ಆಯಾ ಜಿಲ್ಲೆಗಳ ಸಿಇಒಗಳಿಗೆ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಬಂದ ಪುಟ್ಟ,ಹೋದ ಪುಟ್ಟ

ಸಿಇಒ ಕಚೇರಿಯಲ್ಲಿ ವರದಿ ಮಾಡಿಕೊಂಡ ಪಿಡಿಒಗಳಿಗೆ ಯಾವುದೇ ನಿರ್ದಿಷ್ಟ ಕೆಲಸಗಳನ್ನೂ ಕೊಟ್ಟಿಲ್ಲ. ಆಗ ಸ್ಥಳ ನಿಯುಕ್ತಿ ಆಗಬಹುದು, ಈಗ ನಿಯುಕ್ತಿ ಮಾಡಬಹುದು ಎಂದು ಕೆಲಸ ನೀಡಿಲ್ಲ. ಹಾಗಾಗಿ ಬಂದ ಪುಟ್ಟ ಹೋದ ಪುಟ್ಟ ಎಂಬ ರೀತಿಯಲ್ಲಿ ಸ್ಥಳ ಸಿಗದ ಪಿಡಿಒಗಳು ಕೆಲಸವಿಲ್ಲದೇ ಸಂಬಳ ಪಡೆಯುತ್ತಿದ್ದಾರೆ.

ಸಾರ್ವಜನಿಕ ಕೆಲಸಕ್ಕೆ ಅಡ್ಡಿ

ಎಷ್ಟೋ ಕಡೆಗಳಲ್ಲಿ ಪಂಚಾಯಿತಿಗಳಿಗೆ ಪಿಡಿಒಗಳೇ ಇಲ್ಲ. ಒಬ್ಬೊಬ್ಬ ಪಿಡಿಒಗಳಿಗೆ ಎರಡು ಮೂರು ಗ್ರಾಮ ಪಂಚಾಯಿತಿಗಳಿಗೆ ಸಮವರ್ತಿತ ಪ್ರಭಾರ ನೀಡಲಾಲಾಗಿದೆ. ನಾನಾ ಒತ್ತಡಗಳ ನಡುವೆ ಪಿಡಿಒಗಳು ಕೆಲಸ ಮಾಡುತ್ತಿದ್ದಾರೆ. ಆದಾಗ್ಯೂ ಸರ್ಕಾರ 60-70 ಪಿಡಿಒಗಳನ್ನು ತ್ರಿಶಂಕುಸ್ಥಿತಿಯಲ್ಲಿಟ್ಟಿದೆ.

ಕೌಟುಂಬಿಕ ಸಮಸ್ಯೆಯಲ್ಲಿ ಪಿಡಿಒಗಳು

ವರ್ಷದ ಮಧ್ಯೆ ಸಾರ್ವತ್ರಿಕ ವರ್ಗಾವಣೆ ಮಾಡಿದ್ದರಿಂದ ವರ್ಗಾವಣೆಗೊಂಡ ಪಿಡಿಒಗಳು ಮಕ್ಕಳ ಶಿಕ್ಷಣ ಮತ್ತಿತರ ಕೌಟುಂಬಿಕ ಸಮಸ್ಯೆಗಳಿಗೂ ಸಿಲುಕಿದ್ದಾರೆ. ಇಷ್ಟೆಲ್ಲದರ ನಡುವೆ ನಿರಂತರವಾಗಿ ವರ್ಗಾವಣೆ ನಡೆಯುತ್ತಲೇ ಇದೆ. ಅಧಿಕಾರಿಗಳು ವರ್ಗಾವಣೆಗೆ ನಿರ್ದಿಷ್ಟ ಸೂತ್ರ ಪಾಲಿಸದೇ ಇರುವುದರಿಂದ ಪಿಡಿಒಗಳು ಪಡಿಪಾಟಲು ಪಡುವ ಸ್ಥಿತಿ ನಿರ್ಮಾಣವಾಗಿದೆ.

ಪಿಡಿಒ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ಮಾಡಬೇಕು. ಏಪ್ರಿಲ್-ಮೇ ತಿಂಗಳಲ್ಲಿ ವರ್ಗಾವಣಾ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಸ್ಥಳ ತೋರಿಸದೇ ವರ್ಗಾವಣೆ ಮಾಡಲಾಗಿರುವವರಿಗೆ ತಕ್ಷಣ ಸ್ಥಳ ನಿಯುಕ್ತಿ ಮಾಡಬೇಕು. | ರಾಜು ವಾರದ, ಅಧ್ಯಕ್ಷರು, ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ.