ನೋಯ್ಡಾ: ಮೋಸ ಹೋಗುವವರು ಎಲ್ಲಿಯವರೆಗೂ ಇರುತ್ತಾರೋ ಅಲ್ಲಿಯವರೆಗೂ, ಮೋಸ ಮಾಡುವವರು ಇರುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ನಾವು ಕಾರು ಅಥವಾ ಬೈಕನ್ನು ಖರೀದಿಸುವ ಮುನ್ನ ಅದನೊಮ್ಮೆ ಟೆಸ್ಟ್ ಡ್ರೈವ್ (Test Drive) ಮಾಡಿ ಆ ನಂತರ ಅದನ್ನು ಪರ್ಚೇಸ್ ಮಾಡುತ್ತೇವೆ. ಆದರೆ, ಇಲ್ಲಿಬ್ಬರು ಖದೀಮರು ಅದನ್ನೇ ಬಂಡವಾಳ ಮಾಡಿಕೊಂಡು ಕಾರನ್ನು ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಘಟನೆ ಸಖತ್ ವೈರಲ್ ಆಗಿದೆ.
ಉತ್ತರಪ್ರದೇಶ ಗ್ರೇಟರ್ ನೋಯ್ಡಾದಲ್ಲಿ ಈ ಘಟನೆ ನಡೆದಿದ್ದು, ಯುವಕರಿಬ್ಬರು ಟೆಸ್ಟ್ ಡ್ರೈವ್ಗೆಂದು ಕೇಳಿ ಕಾರಿನೊಂದಿಗೆ ಪರಾರಿಯಾಗಿದ್ದಾರೆ. ಇವರಿಬ್ಬರು ಕಾರನ್ನು ನೋಡಿ ಟೆಸ್ಟ್ ಡ್ರೈವ್‌ಗೆ ತೆಗೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ನೋಯ್ಡಾದಲ್ಲಿರುವ ಸೆಕೆಂಡ್ ಹ್ಯಾಂಡ್ ಕಾರ್ ಶೋರೂಮ್ಗೆ ತೆರಳುವ ಇಬ್ಬರು ಯುವಕರು ಎಸ್ಯುವಿ ಖರೀದಿಸುವುದಾಗಿ ಹೇಳಿ ಕಾರೊಂದನ್ನು ಟೆಸ್ಟ್ ಡ್ರೈವ್‌ಗೆ ತೆಗೆದುಕೊಂಡು ಹೋಗುತ್ತಾರೆ. ಕಾರನ್ನು ತೆಗೆದುಕೊಂಡು ಹೋಗಿ ಗಂಟೆಗಳಾದರೂ ವಾಪಸ್ ಬಾರದೆ ಇರುವುದನ್ನು ನೋಡಿದ ಶೋರೂಮ್ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿದಾಗ ಕಾರು ಕಳ್ಳತನವಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಬುಮ್ರಾ/ಸಿರಾಜ್ನನ್ನು ತಂಡದಿಂದ ಕೈ ಬಿಟ್ಟು ಈತನಿಗೆ ಅವಕಾಶ ಕೊಡಿ; ಯುವ ವೇಗಿ ಪರ ಬ್ಯಾಟ್ ಬೀಸಿದ RCB ಸ್ಟಾರ್
ಈ ಕುರಿತು ಮಾಹಿತಿ ನೀಡಿರುವ ನೋಯ್ಡಾ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಗ್ರೇಟರ್ ನೋಯ್ಡಾದಲ್ಲಿರುವ ಸೆಕೆಂಡ್ ಹ್ಯಾಂಡ್ ಕಾರ್ ಶೋರೂಂಗೆ ಇಬ್ಬರು ವ್ಯಕ್ತಿಗಳು ಗುರುವಾರ ಭೇಟಿ ನೀಡಿದ್ದರು. ಇಡೀ ಶೋರೂಮ್ ಪರಿಶೀಲಿಸಿ ಎಸ್ ಯುವಿ ಖರೀದಿಸುವುದಾಗಿ ಹೇಳಿದ್ದರು. ಆದರಂತೆ ಮಾಲೀಕನ ಬಳಿ ಟೆಸ್ಟ್ ಡ್ರೈವ್ ಕೇಳಿದ್ದರು. ಅವರು ತಮ್ಮ ಸಿಬ್ಬಂದಿಯನ್ನು ಯಾರನ್ನಾದರೂ ಕರೆದುಕೊಂಡು ಹೋಗುವಂತೆ ಹೇಳಿ ಕಾರನ್ನು ಟೆಸ್ಟ್ ಡ್ರೈವ್‌ಗೆ ನೀಡಿದ್ದರು.
ಶೋರೂಮ್ನಿಂದ ಕೆಲ ದೂರ ಹೋದ ಬಳಿಕ ಯುವಕರಿಬ್ಬರು ಸಿಬ್ಬಂದಿಯನ್ನು ಕಾರಿನಿಂದ ತಳ್ಳಿದ್ದು, ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಾರು ಮಾಲೀಕರು ಮತ್ತು ಖರೀದಿಸಲು ಬಂದವರ ನಡುವೆ ಏನಾದರೂ ವಿವಾದ ಉಂಟಾಗಿದೆಯೇ ಎಂಬ ಬಗ್ಗೆಯೂ ತನಿಖೆ ಮಾಡಲಾಗುತ್ತಿದೆ. ಯುವಕರ ಗುರುತು ಅಷ್ಟಾಗಿ ತಿಳಿಯದ ಕಾರಣ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.