ನ್ಯೂಸ್

VIDEO| ಬೈಕ್​ ಚಾಲನೆ ಮಾಡುತ್ತಾ ಸ್ನಾನ ಮಾಡಿದ ಸವಾರರು: ವೈರಲ್​ ವಿಡಿಯೋ ನೋಡಿ ಪೊಲೀಸರು ಮಾಡಿದ್ದೇನು?

ಹನೋಯಿ: ಬೈಕ್​ ಮೇಲೆ ಕುಳಿತ ಇಬ್ಬರು ಸವಾರರು ಬೈಕ್ ಚಾಲನೆ ಮಾಡುತ್ತಾ ಸ್ನಾನ ಮಾಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬೆನ್ನಲ್ಲೇ ಸವಾರರಿಬ್ಬರನ್ನು ಹಿಡಿದು ಪೊಲೀಸರು ದಂಡ ವಿಧಿಸಿರುವ ಘಟನೆ ದಕ್ಷಿಣ ವಿಯೆಟ್ನಾಂನಲ್ಲಿ ನಡೆದಿದೆ.

ಸದಾ ಬಿಜಿಯಾಗಿರುವ ರಸ್ತೆಯಲ್ಲಿಯೇ ಬೈಕ್​ ಚಾಲನೆ ಮಾಡುತ್ತಾ ಸ್ನಾನ ಮಾಡಿರುವುದನ್ನು ಬೇರೆ ವಾಹನ ಸವಾರರು ಮೊಬೈಲ್​ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಶಾರ್ಟ್ಸ್​​ ಧರಿಸಿ ಅರಬೆತ್ತಲೆ ಅವತಾರದಲ್ಲಿ ಬೈಕ್​ ಚಾಲನೆ ಮಾಡುತ್ತಿರುವ ಸವಾರ ಹಾಗೂ ಹಿಂಬದಿ ಸವಾರನ ನಡುವೆ ಒಂದು ನೀರಿನ ಬಕೆಟ್​ ಇದೆ. ಒಂದೇ ಕೈನಲ್ಲಿ ಬೈಕ್​ ನಿರ್ವಹಣೆ ಮಾಡಿ ಇನ್ನೊಂದು ಕೈನಲ್ಲಿ ಸವಾರ ತಲೆ ಹಾಗೂ ಮುಖಕ್ಕೆ ಸೋಪು ಹಾಕಿಕೊಳ್ಳುತ್ತಾನೆ. ಹಿಂಬದಿ ಸವಾರನೂ ಕೂಡ ತಲೆ-ಮುಖಕ್ಕೆ ಸೋಪು ಹಾಕಿಕೊಂಡು ಸ್ನಾನ ಮಾಡುತ್ತಾ ಬೈಕ್​ ಸವಾರಿ ಮಾಡುತ್ತಿರೋ ಸ್ನೇಹಿತನ ತಲೆಗೂ ನೀರು ಹಾಕುತ್ತಾನೆ. ಹೀಗೆ ದಾರಿಯುದ್ದಕ್ಕೂ ಸ್ನಾನ ಮಾಡಿಕೊಂಡು ಹೋಗಿದ್ದಾರೆ.

ಈ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಅನೇಕ ನೆಟ್ಟಿಗರು ಇದೊಂದು ಅಪಯಾಕಾರಿ ಸಾಹಸ ಎಂದು ಟೀಕಿಸಿದ್ದಾರೆ. ಬಳಿಕ ವಿಡಿಯೋ ಪೊಲೀಸ್​ ಗಮನಕ್ಕೆ ಬಂದು ಬೈಕ್​ ನಂಬರ್​ ಸಹಾಯದಿಂದ ಕಳೆದ ಬುಧವಾರ ಸವಾರರಿಬ್ಬರನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಹೆಲ್ಮೆಟ್​, ಡ್ರೈವಿಂಗ್​ ಲೈಸೆನ್ಸ್​, ಮಿರರ್​ ಮತ್ತು ಸಿವಿಲ್​ ಇನ್ಶೂರೆನ್ಸ್​​ ಪ್ರಮಾಣ ಪತ್ರವಿಲ್ಲದೆ ಚಾಲನೆ ಮಾಡಿದ್ದಕ್ಕೆ 5,500 ರೂ. ದಂಡ ವಿಧಿಸಿದ್ದಾರೆ. ಚಾಲಕನನ್ನು ಹುಯಿನ್ಹ್ ತನ್ ಖಾನ್ಹ್ ಎಂದು ಗುರುತಿಸಲಾಗಿದೆ. (ಏಜೆನ್ಸೀಸ್​)