ನಂಜನಗೂಡಿನ ಜೆಎಸ್‌ಎಸ್ ಕಲ್ಯಾಣ ಮಂಟಪದಲ್ಲಿ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮತಿ ಮತ್ತು ನವ ಜೀವನ ಸಮಿತಿ ಸದಸ್ಯರ ಸಮಾವೇಶದಲ್ಲಿ ಅಧ್ಯಕ್ಷ ಕೆ.ಎನ್.ಪ್ರಭುಸ್ವಾಮಿ, ವಿಶ್ವಕರ್ಮ ನಿಗಮದ ಮಾಜಿ ಅಧ್ಯಕ್ಷ ನಂದಕುಮಾರ್, ಸೋಮಶೇಖರ್, ವಿಜಯಕುಮಾರ್ ನಾಗನಾಳ ಸೇರಿದಂತೆ ಇತರರು ಭಾಗವಹಿಸಿದ್ದರು. 
ನ್ಯೂಸ್

ಮಧ್ಯ ವ್ಯಸನದಿಂದ ಎರಡು ಲಕ್ಷ ಜನರಿಗೆ ಮುಕ್ತಿ

ನಂಜನಗೂಡು: ರಾಜ್ಯದಲ್ಲಿ 2 ಸಾವಿರ ಮದ್ಯವರ್ಜನ ಶಿಬಿರವನ್ನು ಆಯೋಜನೆ ಮಾಡಿದ್ದೇವೆ. ಇದರಲ್ಲಿ ಎರಡು ಲಕ್ಷ ಜನರು ಮದ್ಯವನ್ನು ತ್ಯಜಿಸಿ ನೆಮ್ಮದಿ ಜೀವನ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಜನಜಾಗೃತಿ ಅಧ್ಯಕ್ಷ ಕೆ.ಎನ್.ಪ್ರಭುಸ್ವಾಮಿ ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ ಮೈಸೂರು ಜಿಲ್ಲಾ ಜಿಲ್ಲಾ ಜನಜಾಗೃತಿ ವೇದಿಕೆ ಮತ್ತು ಜೆಎಸ್‌ಎಸ್ ಮಹಾವಿದ್ಯಾಪೀಠ ಸಹಯೋಗದಲ್ಲಿ ಸೋಮವಾರ ನಗರದ ಜೆಎಸ್‌ಎಸ್ ಕಲ್ಯಾಣ ಮಂಟಪದಲ್ಲಿ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮದ್ಯ ವ್ಯಸನಿಗಳನ್ನು ಬದಲಾಯಿಸುವ ಮಹಾನ್ ಕಾರ್ಯ ಶ್ರೀ ಕ್ಷೇತ್ರಕ್ಕೆ ಸಲ್ಲುತ್ತದೆ. ದುಶ್ಚಟದಿಂದ ದೂರವಿದ್ದು ನೆಮ್ಮದಿ ಜೀವನವನ್ನು ಕಟ್ಟಿಕೊಳ್ಳಬೇಕು. ಮದ್ಯಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಂದಾಗಿದೆ. ಪಾನಮುಕ್ತ ರಾಜ್ಯವನ್ನಾಗಿ ಮಾಡಲು ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸುತ್ತಾ ಬಂದಿದ್ದೇವೆ ಎಂದರು.

ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನಂದಕುಮಾರ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಸ್ವಾಸ್ಥ್ಯ, ಆರೋಗ್ಯಪೂರ್ಣ ಸಮಾಜಕ್ಕಾಗಿ ಹಲವಾರು ಸಮಾಜಮುಖಿ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದೆ. ರಾಜ್ಯಾದ್ಯಂತ ಸಾವಿರಾರು ಕೆರೆ ಗಳನ್ನು ಪುನರುಜ್ಜೀವನ ಗೊಳಿಸಿದೆ, ವೃದ್ದರಿಗೆ ಮಾಶಾಸನ ,ವಿದ್ಯಾರ್ಥಿ ವೇತನದಂತಹ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಇದಲ್ಲದೆ 7ಲಕ್ಷ ಮಹಿಳಾ ಸಹಕಾರ ಸಂಘಗಳು ಅಸ್ತಿತ್ವದಲ್ಲಿದೆ. ಇದರಲ್ಲಿ 80 ಲಕ್ಷ ಮಹಿಳಾ ಸದಸ್ಯರು ಇದರ ಪ್ರಯೋಜನ ಪಡೆದು ಕೊಂಡಿದ್ದಾರೆ, ಸಂಸ್ಥೆಯ ವತಿಯಿಂದ ಹಲವಾರು ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ. ಧರ್ಮಸ್ಥಳ ಪೂಜ್ಯರು ಹಮ್ಮಿಕೊಳ್ಳದ ಸಮಾಜ ಮುಖಿ ಕೆಲಸಗಳೆ ಇಲ್ಲ ಎಂದರು.

ಸಮಾವೇಶದಲ್ಲಿ ಪ್ರಾದೇಶಿಕ ನಿರ್ದೇಶಕ ಜಯಂತ ಪೂಜಾರಿ, ಜೆಎಸ್‌ಎಸ್ ಕಾಲೇಜಿನ ಮುಖ್ಯಸ್ಥ ಡಾ.ಎಂ.ಪಿ ಸೋಮಶೇಖರ್, ಅನುರಾಗ ಮಕ್ಕಳ ಮನೆಯ ಸಂಸ್ಥಾಪಕ ಸೋಮಶೇಖರ ಮೂರ್ತಿ, ಜನಜಾಗೃತಿ ಸಮಿತಿಯ ಉಪಾಧ್ಯಕ್ಷೆ ಕಮಲಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ವಿಜಯಕುಮಾರ್ ನಾಗನಾಳ, ತಾಲೂಕು ಯೋಜನಾಧಿಕಾರಿ ಧರ್ಮರಾಜ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷೆ ಲತಾ ಮುದ್ದು ಮೋಹನ್, ಜನಜಾಗೃತಿ ಸಮಿತಿಯ ಸದಸ್ಯರಾದ ಶಿವಯ್ಯ, ವರದರಾಜು, ನಾರಾಯಣ್, ಮೂರ್ತಿ, ಶಶಿಕಲಾ ಗಿರೀಶ್, ಹೊನ್ನನಾಯಕ, ಜಗದೀಶ್ ಕಣೇನೂರು ಸೇರಿದಂತೆ ನವ ಜೀವನ ಸಮಿತಿಯ ಸದಸ್ಯರು, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು ಭಾಗವಹಿಸಿದ್ದರು.