ನ್ಯೂಸ್

ಪ್ರತ್ಯೇಕ ರಸ್ತೆ ಅಪಘಾತ ಇಬ್ಬರು ಸಾವು, ಒರ್ವನಿಗೆ ಗಾಯ

ಬೆಂಗಳೂರು: ರಾಜಧಾನಿಯಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮೃತಪಟ್ಟು ಒಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.

ದ್ವಿಚಕ್ರ ವಾಹನ ಚಾಲನೆ ಮಾಡುವಾಗ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದ ಪರಿಣಾಮ ಹಿಂಬದಿ ಸವಾರನ ಮೇಲೆ ಅಪರಿಚಿತ ವಾಹನದ ಚಕ್ರ ಹರಿದು ಆತ ಸ್ಥಳದಲ್ಲೇ ಮೃತಪಟ್ಟರೆ, ಸ್ನೇಹಿತನ ಸಾವಿನ ದುಃಖ ತಾಳಲಾರದೆ ಮೇಲ್ಸೇತುವೆಯಿಂದ ಸರ್ವಿಸ್ ರಸ್ತೆಗೆ ಸವಾರ ಜಿಗಿದು ಗಂಭೀರವಾಗಿ ಗಾಯಗೊಂಡಿದ್ದಾನೆ.

ಉತ್ತರಖಂಡ ಮೂಲದ ದಿನೇಶ್ ಭಟ್(೩೪) ಮೃತ ಹಿಂಬದಿ ಸವಾರ. ಸವಾರ ಟೀಕರಾಜ ಭಟ್(೩೩) ಗಂಭೀರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ನಾಯಂಡಹಳ್ಳಿ ಜಂಕ್ಷನ್ ಕಡೆಯಿಂದ ರಿಂಗ್ ರಸ್ತೆಯಲ್ಲಿ ತುಮಕೂರು ರಸ್ತೆ ಕಡೆಗೆ ತೆರಳುವಾಗ ಮಾರ್ಗ ಮಧ್ಯೆ ಮಾಳಗಾಳ ಮೇಲ್ಸೇತುವೆ ಭಾನುವಾರ ಮುಂಜಾನೆ ೨ ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

ತಲೆ ಮೇಲೆ ಹರಿದ ವಾಹನದ ಚಕ್ರ:
ದಿನೇಶ್ ಭಟ್ ಮತ್ತು ಟೀಕರಾಜ ಭಟ್ ಇಬ್ಬರು ಬನಶಂಕರಿಯ ಖಾಸಗಿ ಕಾಲೇಜಿನ ಕ್ಯಾಂಟಿನ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಶನಿವಾರ ರಾತ್ರಿ ಟೀಕರಾಜ ಭಟ್ ಮತ್ತು ದಿನೇಶ್ ಭಟ್ ಇಬ್ಬರು ಮದ್ಯಪಾನ ಮಾಡಿದ್ದಾರೆ. ಬಳಿಕ ಮದ್ಯದ ನಶೆಯಲ್ಲಿ ಟೀಕರಾಜ ಭಟ್ ಹೋಂಡಾ ಆಕ್ವಿವಾ ಸ್ಕೂಟರ್‌ನಲ್ಲಿ ಸ್ನೇಹಿತ ದಿನೇಶ್ ಭಟ್‌ನನ್ನು ಕೂರಿಸಿಕೊಂಡು ನಾಯಂಡಹಳ್ಳಿ ಜಂಕ್ಷನ್ ಕಡೆಯಿಂದ ತುಮಕೂರು ರಸ್ತೆಗೆ ಕಡೆಗೆ ಹೊರಟ್ಟಿದ್ದಾನೆ. ಮಾರ್ಗ ಮಧ್ಯೆ ಮಾಳಗಾಳ ರಸ್ತೆಯಲ್ಲಿ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಅಪರಿಚಿತವಾಹನವೊಂದರ ಚಕ್ರ ದಿನೇಶ್ ಭಟ್‌ನ ತಲೆ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ದುಃಖ ತಾಳಲಾರದ ಮೇಲ್ಸೇತುವೆಯಿಂದ ಜಿಗಿದ:
ಅಪಘಾತದ ವೇಳೆ ಸವಾರ ಟೀಕರಾಜ ಭಟ್ ಸಣ್ಣಪುಟ್ಟಗಳಾಗಿ ಪ್ರಾಣಪಾಯದಿಂದ ಪಾರಾಗಿದ್ದ. ಆದರೆ, ಕಣ್ಣೆದುರೇ ತನ್ನ ಸ್ನೇಹಿತ ದಿನೇಶ್ ಭಟ್ ದಾರುಣವಾಗಿ ಮೃತನಾದ ಹಿನ್ನೆಲೆಯಲ್ಲಿ ದುಃಖ ತಾಳಲಾರದೆ ಮೇಲ್ಸೇತುವೆಯಿಂದ ಸರ್ವಿಸ್ ರಸ್ತೆಗೆ ಜಿಗಿದಿದ್ದಾನೆ. ಈ ವೇಳೆ ಟೀಕರಾಜ ಭಟ್‌ನ ಬಲಗಾಲು ಮುರಿದು ಗಂಭೀರವಾಗಿ ಗಾಯಗೊಂಡಿದ್ದಾನೆ. ಬಳಿಕ ಸ್ಥಳೀಯರ ನೆರವಿನಿಂದ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸವಾರ ಟೀಕರಾಜ ಭಟ್ ಮದ್ಯದ ನಶೆಯಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ರಸ್ತೆಗೆ ಬಿದ್ದಾಗ ಹಿಂಬದಿ ಸವಾರನ ತಲೆ ಮೇಲೆ ಚಕ್ರ ಹರಿಸಿಕೊಂಡು ಹೋಗಿರುವ ಅಪರಿಚಿತ ವಾಹನದ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾದಾಚಾರಿ ಸಾವು:
ಮತ್ತೊಂದು ಪ್ರಕರಣದಲ್ಲಿ ರಸ್ತೆ ವಿಭಜಕ ದಾಟುವಾಗ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಪಾದಾಚಾರಿ ಮೃತಪಟ್ಟಿದ್ದಾರೆ.
ಆಡುಗೋಡಿ ನಿವಾಸಿ ನರೇಂದ್ರ(೪೭) ಮೃತ ಪಾದಾಚಾರಿ. ಬಿಬಿಎಂಪಿ ಕಸ ಸಂಗ್ರಹಿಸುವ ವಾಹನ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ನರೇಂದ್ರ, ಶುಕ್ರವಾರ ಕೆಲಸ ಮುಗಿಸಿ ಮಧ್ಯಾಹ್ನ ೧೨.೩೦ರ ಸುಮಾರಿಗೆ ಹೊಸೂರು ರಸ್ತೆಯ ಕಿದ್ವಾಯಿ ಆಸ್ಪತ್ರೆ ಬಳಿ ರಸ್ತೆ ವಿಭಜಕ ದಾಟುವಾಗ ಡೈರಿ ಸರ್ಕಲ್ ಕಡೆಯಿಂದ ಬಂದ ಖಾಸಗಿ ಬಸ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಸ್ಥಳೀಯರು ಕೂಡಲೇ ನರೇಂದ್ರನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಿಸದೆ ಸಂಜೆ ೫.೩೦ರ ಸುಮಾರಿಗೆ ಮೃತಪಟ್ಟಿದ್ದಾನೆ.
ಮೃತ ಪಾದಾಚಾರಿ ನರೇಂದ್ರ ಬಳ್ಳಾರಿ ಮೂಲದವನಾಗಿದ್ದು, ಆಡುಗೋಡಿಯಲ್ಲಿ ತಂಗಿ ಮನೆಯಲ್ಲಿ ನೆಲೆಸಿದ್ದ. ಬಿಬಿಎಂಪಿ ಕಸ ಸಂಗ್ರಹಿಸುವ ವಾಹನದ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಘಟನೆ ಸಂಬಂಧ ಖಾಸಗಿ ಬಸ್ ಜಪ್ತಿ ಮಾಡಿದ್ದು, ಅದರ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ನರೇಂದ್ರನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.