ಗುವಾಹಟಿ: ಕೋಕ್ರಜಾತ್ನಲ್ಲಿ ನಡೆಯಲಿರುವ ಬೋಡೋ ಶಾಂತಿ ಒಪ್ಪಂದ ಕಾರ್ಯಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅಸ್ಸಾಂ ತಲುಪಿದ್ದಾರೆ.
ಸಿಎಎ ವಿರುದ್ಧವಾಗಿ ಅಲ್ಲಿ ನಡೆದ ಪ್ರತಿಭಟನೆಯಲ್ಲಿ ಮೂವರು ಸಾವನ್ನಪ್ಪಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಜಾರಿಯಾದ ನಂತರದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಈಶಾನ್ಯ ರಾಜ್ಯಕ್ಕೆ ತೆರಳಿದ್ದಾರೆ.
ಬೋಡೋ ಶಾಂತಿ ಒಪ್ಪಂದಕ್ಕೆ ಸಹಿಹಾಕುವ ಸಂಭ್ರಮದ ಕಾರ್ಯಕ್ರಮದಲ್ಲಿ ನಾವೆಲ್ಲ ಭಾಗಿಯಾಗುತ್ತಿದ್ದೇವೆ. ಇದರ ಮೂಲಕ ಆ ಭಾಗದಲ್ಲಿ ದಶಕಗಳಿಂದ ಕಾಡುತ್ತಿದ್ದ ಸಮಸ್ಯೆಯೊಂದು ಬಗೆಹರಿಯುತ್ತಿದೆ. ಇದು ಶಾಂತಿ ಮತ್ತು ಪಗ್ರತಿಯನ್ನು ಒಳಗೊಂಡ ಹೊಸ ಯುಗದ ಆರಂಭ. ಇದೇ ಕಾರ್ಯಕ್ರಮದಲ್ಲಿ ನಾಳೆ ಕೋಕ್ರಜಾರ್ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವೆ. ಹೀಗಾಗಿ ಅಸ್ಸಾಂಗೆ ಭೇಟಿ ನೀಡುವುದನ್ನು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಗುರುವಾರ ಟ್ವೀಟ್ ಮಾಡಿದ್ದರು.
ಭೇಟಿಗೂ ಮುನ್ನ ಎರಡು ಐಇಡಿ ಪತ್ತೆ, ಒಬ್ಬನ ಬಂಧನ: ಮೋದಿಯವರ ಪ್ರವಾಸಕ್ಕೂ ಮುನ್ನ ಭದ್ರತಾಪಡೆ ಗುವಾಹಟಿಯಲ್ಲಿ ಎರಡು ಸುಧಾರಿತ ಸ್ಪೋಟಕ ಉಪಕರಣ (ಐಇಡಿ)ಗಳನ್ನು ಪತ್ತೆ ಹಚ್ಚಿದ್ದು, ಒಬ್ಬ ಶಂಕಿತ ಉಲ್ಫಾ(I) ಕೆಡರ್ನ ಉಗ್ರನನ್ನು ಬಂಧಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗುವಾಹಟಿ ಪೊಲೀಸ್ ಆಯುಕ್ತ ಮುನ್ನಾ ಪ್ರಸಾದ್ ಗುಪ್ತಾ, ಬುಧವಾರ ತಡರಾತ್ರಿ ನಗರದ ಪಲ್ಟಾನಾ ಬಜಾರ್ ಮತ್ತು ಪಾನ್ ಬಜಾರ್ ಪ್ರದೇಶಗಳಲ್ಲಿ ಐಇಡಿಗಳು ಪತ್ತೆಯಾಗಿವೆ. ಕೂಡಲೇ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿ, ಅವುಗಳನ್ನು ದೂರಕ್ಕೆ ಒಯ್ದು ನಿಷ್ಕ್ರಿಯಗೊಳಿಸಿವೆ. ಕೂಡಲೇ ಶೋಧ ಕಾರ್ಯ ಆರಂಭಿಸಿದ ಭದ್ರತಾ ಪಡೆ ಅದೇ ಪ್ರದೇಶದಿಂದ ಶಂಕಿತ ಉಲ್ಫಾ(I) ಕೆಡರ್ನ ಉಗ್ರನನ್ನು ಬಂಧಿಸಿದೆ ಎಂದು ಹೇಳಿದರು. (ಏಜೆನ್ಸೀಸ್)