ಹೈದರಾಬಾದ್: ನಿಯಂತ್ರಣ ಕಳೆದುಕೊಂಡ ಬೈಕ್ ಡಿವೈಡರ್ ಡಿಕ್ಕಿ ಹೊಡೆದು ಇಬ್ಬರು ಇಂಜಿನಿಯರ್ ವಿದ್ಯಾರ್ಥಿಗಳು ಸಾವಿಗೀಡಾಗಿರುವ ಘಟನೆ ಹೈದರಾಬಾದ್ನ ಕುತುಬುಲ್ಲಾಪುರ ಬಳಿಯ ಸುರಾರಾಮ್ನಲ್ಲಿ ನಡೆದಿದೆ.
ಮೃತರನ್ನು ನಿಜಾಮಬಾದ್ನ ಕೊಡಿಗಿರಿ ಮಂಡಲದ ಅನಂತ ವಿಶಾಲ್ (21) ಮತ್ತು ಮಂಚೇರಿಯಲ್ನ ಗೊಪರಾಜು ಸುಜಿತ್ ಕುಮಾರ್ (23) ಎಂದು ಗುರುತಿಸಲಾಗಿದೆ. ಇಬ್ಬರು ಅಂತಿಮ ವರ್ಷದ ಇಂಜಿನಿಯರ್ ವಿದ್ಯಾರ್ಥಿಗಳಾಗಿದ್ದರು. ಗೋಪರಾಜು ಡಿಸೆಂಬರ್ 3ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಉಡುಗೊರೆಯಾಗಿ ಬೈಕ್ ಕೊಡಿಸಿದ್ದರು. ಅದೇ ಬೈಕ್ನಿಂದ ಇದೀಗ ಪ್ರಾಣ ಹೋಗಿದೆ.
ಇಬ್ಬರು ಸಹ ಮೇಡ್ಚಲ್ನ ಮೈಸಮ್ಮಗುಡ್ಡದ ಸೆಂಟ್ ಪೀಟರ್ಸ್ ಇಂಜಿನಿಯರ್ ಕಾಲೇಜು ವಿದ್ಯಾರ್ಥಿಗಳು. ಕಾಲೇಜು ಸಮೀಪದ ಮಹಾಲಕ್ಷ್ಮೀ ಬಾಯ್ಸ್ ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದರು. ಸುರಾರಾಮ್ನ ಕಟ್ಟಾ ಮೈಸಮ್ಮ ದೇವಸ್ಥಾನದ ಬಳಿ ಯಮಹಾ ಬೈಕ್ ಅಪಘಾತವಾಗಿರುವ ಬಗ್ಗೆ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ದುಂಡಿಗಲ್ ಕಂಟ್ರೋಲ್ ರೂಮ್ಗೆ ಕರೆ ಬರುತ್ತದೆ. ತಕ್ಷಣ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ಇಬ್ಬರು ಸಹ ಗಂಭೀರ ಗಾಯದಿಂದ ಸ್ಥಳದಲ್ಲೇ ಮೃತಪಟ್ಟಿದ್ದರು. ಹಲ್ಮೆಟ್ ಧರಿಸದೇ ಇದ್ದದ್ದು ಸಾವಿಗೆ ಕಾರಣವಾಗಿದೆ.
ಇಬ್ಬರು ಗುರುತನ್ನು ಪತ್ತೆಹಚ್ಚಲು ಪೊಲೀಸರು ಗುರುತಿನ ಚೀಟಿಗಾಗಿ ಹುಡುಕಾಡಿದಾಗ ಕೆಂಪು ಬಣ್ಣದ ಪ್ಯಾಕ್ ಒಂದು ಪತ್ತೆಯಾಗಿದೆ. ತೆರೆದು ನೋಡಿದಾಗ ಅದರಲ್ಲಿ ಒಂದು ಕೆ.ಜಿ ಗಾಂಜಾ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ಸಮಯದಲ್ಲಿ ಇಬ್ಬರು ಹಾಸ್ಟೆಲ್ನಿಂದ ಬರುತ್ತಿದ್ದರು.
ಮೃತರು ಗಾಂಜಾ ಸೇವಿಸಿದ್ದರಾ ಎಂದು ತಿಳಿಯಲು ರಕ್ತದ ಮಾದರಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಅಪರಿಚಿತರಿಂದ ಗಾಂಜಾ ಪಡೆದು ಮರಳಿ ಹಾಸ್ಟೆಲ್ಗೆ ಬರುವಾಗ ಅಪಘಾತ ಸಂಭವಿಸಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗಾಂಜಾ ಮೂಲ ಯಾವುದು ಎಂಬ ಪತ್ತೆಗೆ ಬಲೆ ಬೀಸಿದ್ದಾರೆ. (ಏಜೆನ್ಸೀಸ್)