ಬೆಂಗಳೂರು: ಬೈಕ್‌ಗಳನ್ನು ವೇಗವಾಗಿ ಚಲಾಯಿಸಿದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಸಿದ್ದಾಪುರ ಪೊಲೀಸರು 12 ಮಂದಿಯನ್ನು ಬಂಧಿಸಿದ್ದಾರೆ.
ಜಯನಗರ 1ನೇ ಹಂತ ಗುಟ್ಟೇಪಾಳ್ಯದಲ್ಲಿ ಏ. 28ರಂದು ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಈ ಕುರಿತು ದೂರು-ಪ್ರತಿದೂರು ಸ್ವೀಕರಿಸಿ ಬಾಬು, ಪ್ರವೀಣ್, ಅರುಣ್, ಅಜಿತ್ ಭರತ್ ಮತ್ತು ಮತ್ತೊಂದು ಗುಂಪಿನ ವಾಸಿಂ, ವಾಹೀದ್, ಇಲಿಯಾಸ್, ನಹೀಂ,ಅಬಾರ್ಜ ಮತ್ತು ಅಬ್ರಾರ್ ಎಂಬುವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿದ್ದಾಪುರದ ಗುಟ್ಟೇಪಾಳ್ಯದ ಭರತ್‌ರಾಜ್ ಎಂಬಾತನ ಸಂಬಂಧಿಕರು ಸಾವನ್ನಪ್ಪಿದ್ದರು. ಮನೆ ಮುಂದೆ ಶಾಮಿಯಾನ ಹಾಕಿ ಸಾರ್ವಜನಿಕ ದರ್ಶನಕ್ಕೆ ಶವವನ್ನು ಇಡಲಾಗಿತ್ತು. ಕಿರಿದಾದ ರಸ್ತೆಯಲ್ಲಿ ಬೈಕ್‌ನಲ್ಲಿ ವಾಹೀದ್ ಮತ್ತು ಆತನ ಸ್ನೇಹಿತರು ವೇಗವಾಗಿ ಬಂದಿದ್ದರು. ಇದನ್ನು ಭರತ್ ಮತ್ತು ಅರುಣ್ ಮತ್ತಿತರರು ಪ್ರಶ್ನಿಸಿದ್ದರು. ಅಲ್ಲದೆ ವಾಹಿದ್ ತಂದೆಗೂ ಮಗನ ಪುಂಡಾಟಿಕೆ ಬಗ್ಗೆ ಹೇಳಿದ್ದರು.
ಆತನ ತಂದೆ ವಾಹೀದ್‌ಗೆ ಬೈದು ಬೈಕ್ ಕೀ ಕಸಿದುಕೊಂಡಿದ್ದರು. ಇದಕ್ಕೂ ಮುನ್ನ ಸಲ್ಮಾನ್ ಎಂಬಾತನ ಮೇಲೆ ಅಜಿತ್ ಇನ್ನಿತರರು ಹಲ್ಲೆ ಮಾಡಿದ್ದರು. ಕುಪಿತಗೊಂಡ ವಾಹೀದ್, ತನ್ನ ಸಹಚರರ ಜೊತೆಗೆ ಸೇರಿ ಗುಟ್ಟೆಪಾಳ್ಯ ಬಳಿ ನಡೆದುಕೊಂಡು ಹೋಗುತ್ತಿದ್ದ ಭರತ್‌ರಾಜ್ ಇನ್ನಿತರರ ಮೇಲೆ ಚಾಕು-ದೊಣ್ಣೆಗಳಿಂದ ಏಕಾಏಕಿ ಹಲ್ಲೆ ಮಾಡಿದ್ದರು ಎಂದು ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಭರಮಪ್ಪ ಜಗಲಾಸರ್ ತಿಳಿಸಿದ್ದಾರೆ.