ನ್ಯೂಸ್

ತಿಂಗಳೊಂದರಲ್ಲಿ ಎರಡು ಜಾತ್ರೆ: ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ಮಹಾರಥೋತ್ಸವ

kumarvrl

ಶ್ರೀ ಮಲ್ಲಿಕಾರ್ಜುನಸ್ವಾಮಿ ನೆಲೆನಿಂತಿರುವ ಶ್ರೀಶೈಲ ಕ್ಷೇತ್ರವನ್ನು ಭೂಕೈಲಾಸ ಎಂದು ಕರೆಯಲಾಗುತ್ತದೆ. ದೇಶದ ಧಾರ್ವಿುಕ ಸಂಸ್ಕೃತಿಯ ಹೆಗ್ಗುರುತಾಗಿರುವ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಇದೂ ಒಂದು. ಎಲ್ಲ ಕ್ಷೇತ್ರಗಳಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆದರೆ ಶ್ರೀಶೈಲದಲ್ಲಿ ಒಂದೇ ತಿಂಗಳಿನಲ್ಲಿ ಎರಡು ಬೃಹತ್ ಜಾತ್ರೆಗಳು ನಡೆಯುತ್ತವೆ.

ಮಲ್ಲಿಕಾದೇವಿಯಾಗಿರುವ ಗಿರಿಜೆಯನ್ನು ಶಿವನು ಇಲ್ಲಿ ವಿವಾಹವಾದ ಕಾರಣಕ್ಕಾಗಿ ಮಲ್ಲಿಕಾರ್ಜುನ ಎಂಬ ಹೆಸರು ಬಂದಿದೆ. ಅಂದಿನಿಂದ ಶಿವನು ನಿತ್ಯ ನಿವಾಸ ಮಾಡಿರುವ ಶ್ರೀಶೈಲದಲ್ಲಿ ವರ್ಷಪೂರ್ತಿ ಭಕ್ತಸಾಗರವೇ ಹರಿದುಬರುತ್ತದೆ. ವಿಶೇಷವಾಗಿ ಶಿವರಾತ್ರಿ ಜಾತ್ರೆ ನಡೆದ ಹದಿನೈದು ದಿನಗಳಲ್ಲೇ ಹೋಳಿ ಹುಣ್ಣಿಮೆಯಿಂದ ಯುಗಾದಿ ಜಾತ್ರಾಮಹೋತ್ಸವ ಆರಂಭವಾಗುತ್ತದೆ.

ಶಿವರಾತ್ರಿ ಜಾತ್ರೆಯಲ್ಲಿ ಮಲ್ಲಿಕಾರ್ಜುನಸ್ವಾಮಿ-ಭ್ರಮರಾಂಬೆಯರ ಕಲ್ಯಾಣೋತ್ಸವ ವಿಶೇವಾಗಿ ನಡೆದರೆ; ಯುಗಾದಿ ಜಾತ್ರೆಯ ವೇಳೆ ಮಲ್ಲಿಕಾರ್ಜುನಸ್ವಾಮಿಯ ಮಹಾರಥೋತ್ಸವ ವಿಶೇಷವಾಗಿರುತ್ತದೆ. ಶಿವರಾತ್ರಿ ಜಾತ್ರೆಗೆ ಆಂಧ್ರ, ತೆಲಂಗಾಣ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಭಕ್ತರು ಆಗಮಿಸಿದರೆ; ಯುಗಾದಿ ಜಾತ್ರೆಗೆ ಆಗಮಿಸುವ 10ರಿಂದ 15 ಲಕ್ಷ ಭಕ್ತರಲ್ಲಿ ಪ್ರತಿಶತ 90ರಷ್ಟು ಜನ ಕರ್ನಾಟಕದವರು ಎಂಬುದು ವಿಶೇಷ. ಕನ್ನಡನಾಡಿನ ಸುಮಾರು 15 ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಪಾದಯಾತ್ರೆಯ ಮೂಲಕ ಶ್ರೀಶೈಲಕ್ಕೆ ಹೋಗುತ್ತಾರೆ. ಆದರೆ ಈ ವರ್ಷ ಕರೊನಾ ವೈರಸ್ ಭೀತಿ ಇರುವುದರಿಂದ ಶ್ರೀಶೈಲಕ್ಕೆ ಬರುವ ಯಾತ್ರಿಕರು ಗುಂಪಾಗಿ ಬಾರದಂತೆ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಭಕ್ತರಿಗೆ ಕರೆ ನೀಡಿದ್ದಾರೆ. ಪಾದಯಾತ್ರೆಯನ್ನು ಕೈಬಿಟ್ಟು ನೇರವಾಗಿ ಬಂದು ಕೇವಲ ದೇವರ ದರ್ಶನ ಮಾಡಿ ಕೂಡಲೇ ಶ್ರೀಕ್ಷೇತ್ರದಿಂದ ತಮ್ಮ ತಮ್ಮ ಊರುಗಳಿಗೆ ತೆರಳುವಂತೆ ಜಗದ್ಗುರುಗಳು ನಿರ್ದೇಶನ ನೀಡಿದ್ದಾರೆ.

ಧರ್ಮದ ತ್ರಿವೇಣಿ ಸಂಗಮ: ಸ್ಕಂದಪುರಾಣದ ಶ್ರೀಶೈಲಖಂಡದಲ್ಲಿ ಇಲ್ಲಿನ ಮಹಿಮೆಯನ್ನು ವ್ಯಾಸಮಹರ್ಷಿಗಳು ವಿಸõತವಾಗಿ ವರ್ಣಿಸಿದ್ದಾರೆ. ಶ್ರೀಶೈಲಕ್ಕೆ ಸಮನಾದ ಮತ್ತೊಂದು ಕ್ಷೇತ್ರ ಭೂತಕಾಲದಲ್ಲಿಯೂ ಆಗಿಲ್ಲ ಭವಿಷ್ಯತ್ಕಾಲದಲ್ಲಿಯೂ ಆಗುವುದಿಲ್ಲ ಎಂಬ ಮಾತಿದೆ. ‘ಶ್ರೀಶೈಲಶಿಖರೇ ದೃಷ್ಟೇ ಪುನರ್ಜನ್ಮ ನ ವಿದ್ಯತೇ’ ಎನ್ನುವ ಮೂಲಕ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿಯ ದೈವದರ್ಶನ ಮಾತ್ರವಲ್ಲ; ಮಂದಿರದ ಶಿಖರ ದರ್ಶನ ಮಾಡಿದರೂ ಸಾಕು, ಮನುಷ್ಯನಿಗೆ ಪುನರ್ಜನ್ಮವಿಲ್ಲದೆ ಮೋಕ್ಷ ದೊರೆಯಲಿದೆ ಎನ್ನುತ್ತಾರೆ.

ಶ್ರೀಶೈಲವನ್ನು ಧರ್ಮದ ತ್ರಿವೇಣಿ ಸಂಗಮ ಎಂದು ಕರೆಯಲಾಗುತ್ತದೆ. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಲ್ಲಿಕಾರ್ಜುನಸ್ವಾಮಿ ಮಂದಿರ, ಹದಿನೆಂಟು ಶಕ್ತಿಪೀಠಗಳಲ್ಲಿ ಒಂದಾದ ಭ್ರಮರಾಂಬೆ ತಾಯಿ ದೇವಾಲಯ ಹಾಗೂ ಸನಾತನ ಪಂಚಪೀಠಗಳಲ್ಲಿ ಒಂದಾದ ಶ್ರೀಮದ್ಗಿರಿರಾಜ ಸೂರ್ಯ ಸಿಂಹಾಸನ ಜಗದ್ಗುರು ಪಂಡಿತಾರಾಧ್ಯ ಪೀಠ ಒಂದೇ ಆವರಣದಲ್ಲಿರುವ ಪವಿತ್ರ ಕ್ಷೇತ್ರ ಶ್ರೀಶೈಲ.

ಯುಗಯುಗಗಳ ಇತಿಹಾಸ ಇರುವ ಶ್ರೀಶೈಲದಲ್ಲಿ  ಆ ಕಾಲದಿಂದಲೂ ಧಾರ್ವಿುಕ ಮಾರ್ಗದರ್ಶನ ಮಾಡುವ ಶ್ರೀಶೈಲ ಜಗದ್ಗುರುಗಳನ್ನು ಯುಗಾದಿಯಂದು ವೈಭವದ ಅಡ್ಡಪಲ್ಲಕ್ಕಿಯಲ್ಲಿ ಕರೆತಂದು ಮಲ್ಲಿಕಾರ್ಜುನಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಯುಗಾದಿ ಪಾಡ್ಯದಂದು ಮಲ್ಲಿಕಾರ್ಜುನಸ್ವಾಮಿ ಮಹಾರಥೋತ್ಸವದೊಂದಿಗೆ ಜಾತ್ರೆ ಮುಕ್ತಾಯಗೊಳ್ಳುತ್ತದೆ.

ಜಾತ್ರೆಯ ಸಂದರ್ಭದಲ್ಲಿ ಶ್ರೀಶೈಲಪೀಠ ವತಿಯಿಂದ ರಾಷ್ಟ್ರೀಯ ಸದ್ಭಾವನಾ ಗೋಷ್ಠಿ ಹಾಗೂ ಮಲ್ಲಯ್ಯನ ಭಕ್ತರ ಮಹಾಮೇಳವನ್ನು ಆಯೋಜಿಸಿ ಧರ್ಮಜಾಗೃತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಅಂತೆಯೇ ಇದೇ ಮಾ. 19ರಿಂದ 23ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದರೂ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಪಡಿಸಿ ಧಾರ್ವಿುಕ ಕಾರ್ಯಕ್ರಮಗಳನ್ನು ಮಾತ್ರ ನಡೆಸಲಾಗುತ್ತದೆ.

ಲಕ್ಷಾಂತರ ಭಕ್ತರ ಪಾದಯಾತ್ರೆ: ಉತ್ತರ ಕರ್ನಾಟಕದ ಗಡಿ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಮಲ್ಲಿಕಾರ್ಜುನಸ್ವಾಮಿಯ ಹೆಸರಿನಲ್ಲಿ ಒಂದು ಕಂಬಿಯನ್ನು ಇಟ್ಟು, ಅದಕ್ಕೆ ಮಲ್ಲಯ್ಯನ ಕಂಬಿ ಎಂದು ಕರೆಯುತ್ತಾರೆ. ಹೋಳಿಹುಣ್ಣಿಮೆಯ ನಂತರ ಪೂಜೆ ಸಲ್ಲಿಸಿ ಆ ಕಂಬಿಯನ್ನು ಹೊತ್ತು ಶ್ರೀಶೈಲಕ್ಕೆ ಪಾದಯಾತ್ರೆ ಹೋಗುತ್ತಾರೆ. ಪ್ರಾಚೀನಕಾಲದಿಂದಲೂ ಇರುವ ಮಲ್ಲಯ್ಯನ ಕಂಬಿಗಳನ್ನು ವರ್ಷಕ್ಕೊಮ್ಮೆ ಶ್ರೀಶೈಲಕ್ಕೆ ಕೊಂಡೊಯ್ದು ದೇವರ ದರ್ಶನ ಮಾಡಿಕೊಂಡು ಬಂದು ಮತ್ತೆ ತಮ್ಮ ಗ್ರಾಮದಲ್ಲಿ ಪ್ರತಿಷ್ಠಾಪಿಸಿ ವರ್ಷಪೂರ್ತಿ ಪೂಜಿಸುವ ಪದ್ಧತಿ ಇದೆ. ಒಂದೊಂದು ಊರಿನಿಂದ ನೂರಾರು-ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರೆ ಹೋಗುವವರಿದ್ದಾರೆ. ದೈಹಿಕವಾಗಿ ಸದೃಢವಾಗಿರುವ ಭಕ್ತರು ತಮ್ಮ ಗ್ರಾಮದಿಂದಲೇ ಪಾದಯಾತ್ರೆ ಮಾಡಿದರೆ, ಅಶಕ್ತರು ವಾಹನಗಳ ಮೂಲಕ ತೆರಳಿ ಶ್ರೀಶೈಲ ಬೆಟ್ಟದಿಂದ, ಕ್ಷೇತ್ರನಾಥ ವೀರಭದ್ರನ ವೃತ್ತ ಹಾಗೂ ಸಾಕ್ಷಿಗಣಪತಿ ಮಂದಿರದಿಂದ ಪಾದಯಾತ್ರೆ ಹೋಗುತ್ತಾರೆ. ಜಾತ್ರೆಯ ಅವಧಿಯಲ್ಲಿ ಶ್ರೀಮಲ್ಲಿಕಾರ್ಜುನಸ್ವಾಮಿ ಲಿಂಗವನ್ನು ರ್ಸ³ಸಿ ದರ್ಶನ ಮಾಡುವ ಅವಕಾಶವಿರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಪಾದಯಾತ್ರೆ ಮಾಡುವವರಿಗೆ ದಾರಿಯುದ್ದಕ್ಕೂ ದಾಸೋಹ, ಕುಡಿಯುವ ನೀರು, ಮಜ್ಜಿಗೆ, ಪಾನಕಗಳನ್ನು ನೀಡಿ ಉಪಚರಿಸುವ ನೂರಾರು ಸಂಘಸಂಸ್ಥೆಗಳ ಸೇವೆಗೂ ಈ ಬಾರಿ ಕರೊನಾ ಬಿಸಿ ತಟ್ಟಿದೆ.

ಪ್ರಶಾಂತ ರಿಪ್ಪನ್​ಪೇಟೆ