ಬೆಂಗಳೂರು: ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತ ಪರಿಣಾಮದಿಂದ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ, ಮುಂದಿನ 2 ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ ಸೇರಿ ದಕ್ಷಿಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಭಾನುವಾರ ಮುಂಜಾನೆಯಿಂದ ಮೋಡ ಕವಿದ ವಾತಾವರಣದೊಂದಿಗೆ ಜಿಟಿಜಿಟಿ ಮಳೆಯಾಯಿತು.
ಇನ್ನೂ ಕೆಲ ಜಿಲ್ಲೆಗಳಲ್ಲಿ ಕನಿಷ್ಠ, ಗರಿಷ್ಠ ತಾಪಮಾನದಲ್ಲಿ ಉಷ್ಣಾಂಶ ಕುಸಿತವಾಗಿ ಥಂಡಿ ವಾತಾವರಣ ಉಂಟಾಗಿತ್ತು. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿತ್ರದುರ್ಗದಲ್ಲಿ ಜ.20ರಂದು ಹಾಗೂ ದಕ್ಷಿಣ ಕನ್ನಡದಲ್ಲಿ ಮುಂದಿನ 48 ಗಂಟೆ ಹಗುರದಿಂದ ಕೂಡಿದ ಸಾಧಾರಣ ವರ್ಷಧಾರೆಯಾಗಲಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ. ಕರಾವಳಿ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಬೀಳಲಿದೆ.
ಮಂಗಳೂರು ನಗರ, ಪುತ್ತೂರು, ಮೂಲ್ಕಿ ಸಹಿತ ಜಿಲ್ಲೆಯ ಕೆಲವು ಕಡೆಗಳಲ್ಲಿ ಭಾನುವಾರ ಸಂಜೆ ಗುಡುಗು ಸಹಿತ ಮಳೆಯಾಗಿದೆ.
ಬಂಗಾಳಕೊಲ್ಲಿಯಲ್ಲಿ ತೇವಾಂಶ ಭರಿತ ಮೋಡ, ವಾಯುಭಾರ ಕುಸಿತದಿಂದ ಹವಾಮಾನದಲ್ಲಿ ದಿಢೀರ್ ಬದಲಾವಣೆಯಾಗಿದೆ. ಸೋಮವಾರವರೆಗೆ ಮಾತ್ರ ಮಳೆ ಇರಲಿದೆ. ಮಂಗಳವಾರದಿಂದ ರಾಜ್ಯಾದ್ಯಂತ ಒಣಹವೆ ಮುಂದುವರಿಯಲಿದೆ. | ಸಿ.ಎಸ್.ಪಾಟೀಲ್ ಹವಾಮಾನ ಇಲಾಖೆ ನಿರ್ದೇಶಕ