ತುಮಕೂರು: ಸಂಕೀರ್ಣವಾದ ಹೃದಯದ, ಜನ್ಮಜಾತ ಹೃದಯರೋಗ ಸಮಸ್ಯೆ ಹಾಗೂ ಟ್ರಂಕಸ್ ರೋಗಕ್ಕೆ ತುತ್ತಾಗಿದ್ದ ಇಬ್ಬರು ಮಕ್ಕಳಿಗೆ ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಿದ್ಧಾರ್ಥ ಅಡ್ವಾನ್ಸ್ ್ಡ ಹಾರ್ಟ್ ಸೆಂಟರ್ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ಮಾಡಿದೆ.
ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ನಿರ್ದೇಶಕ ಡಾ.ಜಿ.ಪರಮೇಶ್ವರ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಕ್ಕಳಿಗೆ ಮರುಹುಟ್ಟು ನೀಡಿರುವ ವೈದ್ಯರ ತಂಡ ಇನ್ನೊಂದು ಮೈಲಿಗಲ್ಲು ಸ್ಥಾಧಿಸಿದೆ ಎಂದು ಪ್ರಶಂಸಿಸಿದರು.
ಹೈದರಾಬಾದ್‌ನ 20 ದಿನಗಳ ಹಸುಗೂಸು ಹಾಗೂ ತುಮಕೂರು ತಾಲೂಕಿನ ಟ್ರಂಕಸ್ ರೋಗಕ್ಕೆ ತುತ್ತಾಗಿರುವ 3 ತಿಂಗಳಿನ ಮಗುವಿಗೆ ಆಗಿರುವ ಹೃದಯ ಶಸ್ತ್ರಚಿಕಿತ್ಸೆ ಅತೀಸೂಕ್ಷ್ಮವಾಗಿದ್ದು, ಯಶಸ್ವಿಯಾಗಿದೆ ಎಂದರು.
ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಸರಿಸಾಟಿಯಾಗಬಲ್ಲ ಆಧುನಿಕ ಉಪಕರಣಗಳ ಅಳವಡಿಕೆ ಮತ್ತು ತಜ್ಞ ವೈದ್ಯರ ತಂಡದಿಂದ ಅತೀ ಸೂಕ್ಷ್ಮ ರೀತಿಯ ಹೃದಯ ಶಸತ್ರ ಚಿಕಿತ್ಸೆಗಳನ್ನು ಮಾಡಬಹುದು ಎಂಬುದನ್ನು ಕಾರ್ಡಿಯಾಕ್ ಫ್ರಾಂಟಿಡಾ ಹಾಗೂ ಸಿದ್ಧಾರ್ಥ ಹಾರ್ಟ್ ಸೆಂಟರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರ ತಂಡ ಸಾಬೀತುಪಡಿಸಿದೆ ಎಂದರು.
ಸಿದ್ಧಾರ್ಥ ಹಾರ್ಟ್ ಸೆಂಟರ್‌ನ ಮುಖ್ಯಸ್ಥ ಡಾ.ತಮೀಮ್ ಅಹ್ಮದ್ ಮಾತನಾಡಿ, ತುಮಕೂರಿನಲ್ಲಿ ಹಸುಗೂಸಿನ ಅತ್ಯಂತ ಸಂಕೀರ್ಣ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿರುವುದು ಇದೇ ಮೊದಲು. ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಮಕ್ಕಳೂ ಬಹುಬೇಗ ಗುಣಮುಖರಾಗಿ ಸಹಜ ಜೀವನ ನಡೆಸುತ್ತಿದ್ದಾರೆ ಎಂದರು.
ಡಾ.ಶ್ರೀನಿವಾಸ್, ಡಾ.ವಿಕಾಸ್, ಡಾ.ಸುರೇಶ್, ಡಾ.ತಹೂರ್, ಡಾ.ವಾಂಗ್ಚುಕ್, ಡಾ.ಮಸ್ತಾನ್, ವಿವೇಕ್, ಜಾನ್ ಹಾಗೂ ತಾಂತ್ರಿಕ ಸಿಬ್ಬಂದಿಗಳನ್ನು ಒಳಗೊಂಡ ತಂಡ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ.