ನ್ಯೂಸ್

ಇಬ್ಬರು ಸರಗಳ್ಳರ ಬಂಧನ

ಕಿರುವಾರ ಎಸ್.ಸುದರ್ಶನ್

ಕೋಲಾರ: ದಾರಿ ಕೇಳುವ ನೆಪದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರಿಂದ ಮಹಿಳೆಯ ಕೊರಳಿನಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಕದೀಮರನ್ನು ಕೋಲಾರ ಗ್ರಾಮಾಂತರ ಪೋಲೀಸರು ಬಂಧಿಸಿದ್ದಾರೆ.

ಬಂಗಾರಪೇಟೆ ತಾಲೂಕು ಕಣಿಂಬೆಲ್​ ಗ್ರಾಮದ ಕೆ.ಎನ್​.ಸುನಿಲ್​ಕುಮಾರ್​ (22) , ಶ್ರೀನಿವಾಸಪುರ ತಾಲೂಕಿನ ಯಲ್ದೂರು ಗ್ರಾಮದ ಮಂಜುನಾಥ್​ ಬಂಧಿತರು. ಆರೋಪಿಗಳಿಂದ ಸುಮಾರು 12 ಲಕ್ಷ ರೂ. ಬೆಲೆ ಬಾಳುವ 179 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.

ಕೋಲಾರ ತಾಲೂಕಿನ ಹೊಲ್ಲಂಬಳ್ಳಿಯ ಪಾರ್ವತಮ್ಮ ಎಂಬುವವರು ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಷಾಪೂರು ಗ್ರಾಮಕ್ಕೆ ಹೇಗೆ ಹೋಗಬೇಕು ಎಂದು ವಿಳಾಸ ಕೇಳುವ ನೆಪದಲ್ಲಿ ಕುತ್ತಿಯಲ್ಲಿದ್ದ ಸುಮಾರು 60 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಚಿನ್ನ ಕಳೆದುಕೊಂಡ ಪಾರ್ವತಮ್ಮ ಕೋಲಾರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಆರೋಪಿಗಳು ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ಬೆಳಕಿಗೆ ಬಂದಿದೆ. ಕೋಲಾರ ಗ್ರಾಮಾಂತರ ಪೋಲೀಸರ ಕಾರ್ಯವನ್ನು ಎಸ್​ಪಿ ಬಿ.ನಿಖಿಲ್​ ಶ್ಲಾಸಿದ್ದಾರೆ.

ಕಾರ್ಯಾಚರಣೆಯಲ್ಲಿ ಕೋಲಾರ ಗ್ರಾಮಾಂತರ ಪೊಲೀಸ್​ ಠಾಣೆಯ ಸಿಪಿಐ ಕಾಂತರಾಜು, ಪಿಎಸ್​ಐ ವಿ.ಭಾರತಿ, ಮುಳಬಾಗಿಲು ನಗರ ಠಾಣೆಯ ಪಿಎಸ್​ಐ ಅಣ್ಣಯ್ಯ, ಸಿಬ್ಬಂದಿ ಮುರಳಿ, ಮಂಜುನಾಥ, ಸಾದಿಕ್​ಪಾಷಾ, ರಾವೇಂದ್ರ, ಅಂಜಪ್ಪ, ರಾಜೇಶ್​, ಶ್ರೀನಾಥ್​, ನವೀನ್​, ಸತೀಶ್​ ಶಿವಾ ಆಚಾರಿ, ಅಬ್ದುಲ್​ ಪಾರೂಕ್​ಪಾಷಾ ಇದ್ದರು.