ಶಿವಮೊಗ್ಗ: ಲಾರಿ ಮತ್ತು ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಮೂವರು ಯುವಕರು ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಲ್ಲಿಹಾಳ್-ಅರಹತೊಳಲು ಬಳಿ ಸಂಭವಿಸಿದೆ.
ಲಾರಿಯನ್ನು ಓವರ್ಟೇಕ್ ಮಾಡಲು ಹೋದ ಮೂವರಿದ್ದ ಬೈಕ್, ಎದುರಿನಿಂದ ಬರುತ್ತಿದ್ದ ಮತ್ತೊಂದು ಬೈಕ್ಗೆ ಡಿಕ್ಕಿ ಹೊಡೆದ ರಭಸಕ್ಕೆ ಮೂವರು ಯುವಕರು ಲಾರಿಯ ಚಕ್ರದ ಕೆಳಗೆ ಸಿಲುಕಿ, ಮೃತಪಟ್ಟಿದ್ದಾರೆ.
ಗುರುತು ಸಿಗದಂತೆ ದೇಹಗಳು ಛಿದ್ರಗೊಂಡಿದೆ. ಘಟನಾ ಸ್ಥಳದಿಂದ ಲಾರಿ ಚಾಲಕ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಭದ್ರಾವತಿ ತಾಲೂಕಿನ ಅರದೊಟ್ಲು ಗ್ರಾಮದ ಗಗನ್ ಅಪಘಾತಕ್ಕೆ ಸಿಲುಕಿ, ತಮ್ಮ ಕೈ-ಕಾಲು ಕಳೆದುಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೈಮರದಿಂದ ಕಲ್ಲಿಹಾಳ್ ಕಡೆಗೆ ತೆರಳುತ್ತಿದ್ದ ಗಗನ್ಗೆ ಎದುರಿನಿಂದ ಬರುತ್ತಿದ್ದ ಮೂವರಿದ್ದ ಬೈಕ್, ಲಾರಿ ಓವರ್‌ಟೆಕ್ ಮಾಡುವ ಭರದಲ್ಲಿ ಡಿಕ್ಕಿ ಹೊಡೆದಿದೆ. ಈ ವೇಳೆ ನಿಯಂತ್ರಣಕ್ಕೆ ಸಿಗದೆ ಲಾರಿ ಅಡಿಗೆ ಬೈಕ್ಗಳು ಸಿಲುಕಿದ ಕಾರಣ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಘಟನೆ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ಸಂಭವಿಸಿದೆ ಎಂದು ವರದಿಯಾಗಿದೆ.