ಸೋಮವಾರಪೇಟೆ ಅರಣ್ಯ ಇಲಾಖೆ ವ್ಯಾಪ್ತಿಯ ಜೇನುಕಲ್ಲು ಮೀಸಲು ಅರಣ್ಯದಲ್ಲಿ ಕಾಡುಹಂದಿ ಬೇಟೆಯಾಡಿದ ಇಬ್ಬರು ಅರೋಪಿಗಳನ್ನು ಮಾಲು ಸಮೇತ ಬಂಧಿಸಲಾಗಿದೆ. ಶೈಲೇಂದ್ರಕುಮಾರ್, ಭರತ್, ಭೀಮನಗೌಡ, ರಾಜಪ್ಪ, ವರುಣ್ ಚಿತ್ರದಲ್ಲಿದ್ದಾರೆ. 
ನ್ಯೂಸ್

ಕಾಡುಹಂದಿ ಬೇಟೆಯಾಡಿದ್ದ ಇಬ್ಬರ ಬಂಧನ

ಶಿವಶಂಕರ್ ಎಂ. ಹೆಬ್ಬಳ್ಳ

ಸೋಮವಾರಪೇಟೆ: ಹೆಬ್ಬಾಲೆ ಅರಣ್ಯ ಶಾಖೆಯ ಜೇನುಕಲ್ಲುಬೆಟ್ಟ ಮೀಸಲು ಅರಣ್ಯದಲ್ಲಿ ಕಾಡುಹಂದಿ ಬೇಟೆಯಾಡಿ ಕೊಂದ ಇಬ್ಬರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.

ಕುಶಾಲನಗರ ಪಟ್ಟಣದ ಕರಿಯಪ್ಪ ಬಡಾವಣೆಯ ಎಸ್.ಎಂ.ದಯಾನಂದ ಮತ್ತು ಬಳ್ಳೂರು ಗ್ರಾಮದ ಪಿ.ವಿ.ಮನೋಜ್ ಬಂಧಿತ ಆರೋಪಿಗಳು. ಆರೋಪಿಗಳು ಬೇಟೆಯಾಡಿದ ಹಂದಿಯ ಮೃತದೇಹವನ್ನು ಸಾಗಿಸುತ್ತಿದ್ದ ಸಂದರ್ಭ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಅರೊಪಿಗಳಿಂದ ಎರಡು ಕೋವಿಗಳು, 5 ಜೀವಂತ ತೋಟಗಳು, ಬೊಲೆರೋ ಜೀಪ್, ತಲೆಗೆ ಕಟ್ಟುವ ಟಾರ್ಚ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ ಶಸ್ತ್ರಾಸ್ತ್ರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಡಿಎಫ್‌ಒ ಭಾಸ್ಕರ್, ಎಸಿಎಫ್ ಎ.ಎ.ಗೋಪಾಲ್ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಶೈಲೇಂದ್ರಕುಮಾರ್, ಡಿಆರ್‌ಎಫ್‌ಒ ಎಂ.ಕೆ.ಭರತ್, ಸಿಬ್ಬಂದಿ ಭೀಮನಗೌಡ ಬಿರಾದಾರ್, ರಾಜಪ್ಪ, ವರುಣ್, ವೇದಮೂರ್ತಿ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.