ಬೆಂಗಳೂರು: ಮಹಿಳೆಯ ಕಾರನ್ನು ಹಿಂಬಾಲಿಸಿ ಕಿರುಕುಳ ನೀಡಿದ ಆರೋಪದಡಿ ಇಬ್ಬರನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶೇಷಾದ್ರಿಪುರ ನಿವಾಸಿಗಳಾದ ಜಗನ್ನಾಥ್(೨೮) ಮತ್ತು ತೇಜಸ್(೨೧) ಬಂಧಿತರು. ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಕಣ್ಣನ್ ಎಂಬಾತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಭಾನುವಾರ ರಾತ್ರಿ ಹೊಸೂರು ಕಡೆಯಿಂದ ನಗರದ ಕಡೆ ಬರುವಾಗ ಕಾರಿನಲ್ಲಿದ್ದ ಮಹಿಳೆಗೆ ಕಿರುಕುಳ ನೀಡಿದ್ದರು. ಕೃತ್ಯದ ವಿಡಿಯೋವನ್ನು ಸನುಕ್ ಘೋಷ್ ಎಂಬುವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ನಗರ ಪೊಲೀಸರಿಗೆ ಟ್ಯಾಗ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಡಿವಾಳ ಠಾಣೆ ಪೊಲೀಸರು ಕ್ಷೀಪ್ರ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಧ್ಯದ ಬೆರಳು ತೋರಿಸಿದಕ್ಕೆ ಕಿರುಕುಳ?
ಆರೋಪಿತ ಯುವಕರು ಮೂರು ಬೈಕ್‌ಗಳಲ್ಲಿ ಹೊಸೂರಿನಲ್ಲಿರುವ ಪಾಲ್ಸ್‌ಗೆ ಹೋಗಿ ಭಾನುವಾರ ರಾತ್ರಿ ೮ ಗಂಟೆ ಸುಮಾರಿಗೆ ನಗರಕ್ಕೆ ವಾಪಸ್ ಬರುತ್ತಿದ್ದರು. ಇದೇ ವೇಳೆ ಸೇಂಟ್ ಜಾನ್ ಆಸ್ಪತ್ರೆಯಿಂದ ಹೊರಟ ಮಹಿಳೆ ಹಾಗೂ ಆಕೆಯ ಪತಿ ಕೋರಮಂಗಲ ಕಡೆಯಿಂದ ಮಡಿವಾಳ ಕಡೆ ಕಾರಿನಲ್ಲಿ ಬರುತ್ತಿದ್ದರು. ಮಾರ್ಗ ಮಧ್ಯೆ ಕಾರು ಚಲಾಯಿಸುತ್ತಿದ್ದ ಮಹಿಳೆಯ ಪತಿ ಯಾವುದೇ ಸೂಚನೆ ನೀಡದೆ(ಇಂಡಿಕೇಟರ್ ಹಾಕದೆ ) ಎಡ ತಿರುವು ಪಡೆದುಕೊಂಡಿದ್ದು, ಬೈಕ್‌ಗೂ ಡಿಕ್ಕಿ ಹೊಡೆದಿದ್ದಾರೆ. ಅದರಿಂದ ಕೋಪಗೊಂಡ ಯುವಕರು ಇಂಡಿಕೇಟರ್ ಹಾಕಬೇಕಲ್ಲವೇ? ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ. ಆಗ ಚಾಲಕ ಅಶ್ಲೀಲ ಚಿಹ್ನೆಯಾದ ಮಧ್ಯದ ಬೆರಳು ತೋರಿಸಿ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಅದರಿಂದ ಇನ್ನಷ್ಟು ಆಕ್ರೋಶಗೊಂಡ ಯುವಕರು, ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದು, ಮಡಿವಾಳದ ಅಂಡರ್‌ಪಾಸ್ ಬಳಿ ಕಾರಿನ ಅಕ್ಕ-ಪಕ್ಕ ಬಂದು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹೇಳಲಾಗಿದೆ.
ಎಕ್ಸ್‌ನಲ್ಲಿ ವಿಡಿಯೋ ಶೇರ್:
ಕಾರಿನ ಎರಡು ಕಡೆ ಯುವಕರು ಬಂದು ಅನುಚಿತವಾಗಿ ವರ್ತಿಸಿ ಮಡಿವಾಳದವರೆಗೂ ಕಾರು ಹಿಂಬಾಲಿಸಿಕೊಂಡು ಬಂದಿದ್ದಾರೆ. ಆತಂಕಗೊಂಡ ಮಹಿಳೆ ೧೧೨ ಕರೆ ಮಾಡಿದ್ದಾರೆ. ಮೊಬೈಲ್‌ನಲ್ಲಿ ಯುವಕರ ಪುಂಡಾಟ ಸೆರೆ ಹಿಡಿದುಕೊಂಡಿದ್ದರು. ಕೆಲ ನಿಮಿಷಗಳಲ್ಲಿ ಹೊಯ್ಸಳ ಗಸ್ತು ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದು, ಪೊಲೀಸರನ್ನು ನೋಡಿದ ಆರೋಪಿಗಳು ಪರಾರಿಯಾಗಿದ್ದರು. ಬಳಿಕ ಈ ವಿಡಿಯೋವನ್ನು ಸನುಕ್ ಘೋಷ್ ಎಂಬುವರು ಎಕ್ಸ್‌ನಲ್ಲಿ ಶೇರ್ ಮಾಡಿ, ಪುಂಡರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಮಡಿವಾಳ ಪೊಲೀಸರು ಇಬ್ಬರು ಯುವಕರ ವಿಳಾಸ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಕಣ್ಣನ್‌ಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಜಗನ್ನಾಥ್, ಕಾಲ್ ಸೆಂಟರ್ ಉದ್ಯೋಗಿಯಾಗಿದ್ದು, ತೇಜಸ್ ಶೇಷಾದ್ರಿಪುರದ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದ. ತಲೆಮರಸಿಕೊಂಡಿರುವ ಕಣ್ಣನ್ ಮನೆಗಳಿಗೆ ಪೇಪರ್ ಹಾಕುತ್ತಾನೆ. ಇನ್ನು ಆರೋಪಿಗಳು ವಿಚಾರಣೆಯಲ್ಲಿ, ಕಾರು ಚಾಲಕ ಯಾವುದೇ ಸೂಚನೆ ನೀಡದೇ ಏಕಾಏಕಿ ಎಡತಿರುವು ಪಡೆದುಕೊಂಡು, ಬೈಕ್‌ಗೆ ಡಿಕ್ಕಿ ಹೊಡೆದರು. ಅದನ್ನು ಪ್ರಶ್ನಿಸಿದಕ್ಕೆ ಮಧ್ಯದ ಬೆರಳು ತೋರಿಸಿದರು. ಅದರಿಂದ ಕಾರು ಹಿಂಬಾಲಿಸಲಾಯಿತು. ಅದನ್ನು ಬಿಟ್ಟರೆ ಯಾವುದೇ ಕೆಟ್ಟ ಉದ್ದೇಶ ಇರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.