ನ್ಯೂಸ್

ಉದ್ಯಮಿ ಸುಲಿಗೆ ಮಾಡಿದ್ದ ಇಬ್ಬರ ಬಂಧನ

ಮಂಜುನಾಥ.ಕೆ

ಬೆಂಗಳೂರು: ಉದ್ಯಮಿಯೊಬ್ಬರನ್ನು ಅಪಹರಿಸಿ ಹಲ್ಲೆಗೈದು ಬೆದರಿಸಿ ಹಣ ಸುಲಿಗೆ ಮಾಡಿದ್ದ ಪದವೀಧರ ಸೇರಿ ಇಬ್ಬರನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಜಯನಗರದ ಸಚಿನ್(೨೮) ಮತ್ತು ಪ್ರಕಾಶ್ ನಗರದ ಗೌರಿಶಂಕರ(೨೭) ಬಂಧಿತರು. ಆರೋಪಿಗಳಿಂದ ೭ ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಒಂದು ಆಟೋರಿಕ್ಷಾ, ಒಂದು ಚಾಕುವನ್ನು ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ಶರವಣ ಮತ್ತು ಯಶ್ ಎಂಬುವವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ನಡೆಸಲಾಗಿದೆ.

ಆರೋಪಿಗಳು ಜ.೫ರಂದು ಮಧ್ಯಾಹ್ನ ೧೨.೫೦ರ ಸುಮಾರಿಗೆ ರಾಜಾಜಿನಗರದ ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ಉದ್ಯಮಿ ಚೇತನ್ ಶಾ ಎಂಬುವವರನ್ನು ಅಪಹರಿಸಿ ಬೆದರಿಸಿ ೭ ಲಕ್ಷ ರೂ. ಸುಲಿಗೆ ಮಾಡಿ ಬಳಿಕ ಅವರನ್ನು ಬಿಟ್ಟು ಕಳುಹಿಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಇನ್‌ಸ್ಪೆಕ್ಟರ್ ಪ್ರಮೋದ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಬಿಎಗೆ ಸೀಟು ಕೊಡಿಸುವುದಾಗಿ ಹೇಳಿದ್ದ:
ಚೇತನ್ ಶಾ ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಫ್ಯಾಕ್ಟರಿ ಹೊಂದಿದ್ದಾರೆ. ಪತ್ನಿ ಮತ್ತು ಇಬ್ಬರು ಪುತ್ರಿಯರೊಂದಿಗೆ ರಾಜಾಜಿನಗರ ೪ನೇ ಬ್ಲಾಕ್‌ನಲ್ಲಿ ನೆಲೆಸಿದ್ದಾರೆ. ಚೇತನ್ ಅವರ ಹಿರಿಯ ಮಗಳು ದ್ವಿತೀಯ ಪಿಯುಸಿ ತೇರ್ಗಡೆಯಾದ ಹಿನ್ನೆಲೆಯಲ್ಲಿ ೨೦೨೩-೨೪ನೇ ಸಾಲಿನ ಮೇ ತಿಂಗಳಲ್ಲಿ ನಗರದ ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾಲಯದಲ್ಲಿ ಬಿಬಿಎ ಪದವಿಗೆ ಸೇರಿಸಲು ಪ್ರಯತ್ನಿಸುತ್ತಿದ್ದರು. ತಮ್ಮ ಪುತ್ರಿಯ ಸ್ನೇಹಿತ ಯಶ್ ಎಂಬಾತ ನನ್ನ ಸ್ನೇಹಿತ ಸಚಿನ್ ಎಂಬಾತನಿಗೆ ಆ ಖಾಸಗಿ ವಿಶ್ವವಿದ್ಯಾಲಯದಲ್ಲಿ ಪರಿಚಿತರು ಇದ್ದು, ನಿಮ್ಮ ಮಗಳಿಗೆ ಬಿಬಿಎಗೆ ಸೀಟು ಕೊಡಿಸುತ್ತಾನೆ ಎಂದು ಹೇಳಿದ್ದ. ಅದರಂತೆ ಚೇತನ್, ಸಚಿನ್‌ನನ್ನು ಭೇಟಿ ಮಾಡಿದಾಗ, ಸೀಟು ಕೊಡಿಸಲು ೪ ಲಕ್ಷ ರೂ. ಖರ್ಚಾಗಲಿದೆ ಎಂದು ಹೇಳಿದ್ದ. ಇದಕ್ಕೆ ಚೇತನ್ ಅವರು ಸಹ ಒಪ್ಪಿಗೆ ನೀಡಿದ್ದರು. ಆದರೆ, ಹಲವು ದಿನ ಕಳೆದರೂ ಸಚಿನ್ ಯಾವುದೇ ಮಾಹಿತಿ ನೀಡಿಲ್ಲ. ಈ ನಡುವೆ ಚೇತನ್ ಅವರು ಬೇರೊಬ್ಬರ ಸಹಾಯದಿಂದ ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾಲಯದಲ್ಲಿ ತಮ್ಮ ಮಗಳನ್ನು ಬಿಬಿಎ ಪದವಿಗೆ ಸೇರಿಸಿದ್ದರು. ಈ ವಿಚಾರ ತಿಳಿದ ಸಚಿನ್, ಚೇತನ್ ಅವರನ್ನು ಭೇಟಿಯಾಗಿ ನಾನೇ ನಿಮ್ಮ ಮಗಳಿಗೆ ಬಿಬಿಎ ಪದವಿಗೆ ಸೀಟು ಕೊಡಿಸಿದ್ದೇನೆ. ಹೀಗಾಗಿ ನನಗೆ ೪ ಲಕ್ಷ ರೂ. ನೀಡಬೇಕು ಎಂದು ಬೇಡಿಕೆ ಇರಿಸಿದ್ದ. ಆಗ ಚೇತನ್ ಅವರು, ನೀನು ನನ್ನ ಮಗಳಿಗೆ ಸೀಟು ಕೊಡಿಸಿಲ್ಲ. ಬೇರೆ ವ್ಯಕ್ತಿಯ ಸಹಾಯದಿಂದ ನನ್ನ ಮಗಳಿಗೆ ಸೀಟು ಸಿಕ್ಕಿದೆ. ಹೀಗಾಗಿ ನಾನು ಯಾವುದೇ ಹಣ ನೀಡುವುದಿಲ್ಲ ಎಂದಿದ್ದಾರೆ. ಇದರಿಂದ ಕೋಪಗೊಂಡ ಸಚಿನ್, ಚೇತನ್ ಜತೆಗೆ ಜಗಳ ತೆಗೆದು ಬೆದರಿಕೆ ಹಾಕಿ ಹೊರಟು ಹೋಗಿದ್ದ.

೭ ಲಕ್ಷ ರೂ.ಗೆ ಬೇಡಿಕೆ:
ಜ.೫ರಂದು ಮಧ್ಯಾಹ್ನ ೧ ಗಂಟೆಗೆ ಚೇತನ್ ಮನೆಯಿಂದ ಪೀಣ್ಯದಲ್ಲಿರುವ ಫ್ಯಾಕ್ಟರಿಗೆ ಕಾರಿನಲ್ಲಿ ಹೊರಟ್ಟಿದ್ದರು. ರಾಜಾಜಿನಗರದ ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ತೆರಳುವಾಗ, ನಾಲ್ವರು ಸಹಚರರೊಂದಿಗೆ ಆಟೋರಿಕ್ಷಾದಲ್ಲಿ ಬಂದ ಸಚಿನ್, ಏಕಾಏಕಿ ಕಾರು ಅಡ್ಡಹಾಕಿದ್ದಾನೆ. ಬಳಿಕ ಚೇತನ್ ಅವರನ್ನು ಅವರೇ ಕಾರಿನಲ್ಲಿ ಹಿಂಬದಿ ಸೀಟಿಗೆ ಕೂರಿಸಿಕೊಂಡು ಕಾರನ್ನು ಚಲಾಯಿಸಿಕೊಂಡು ಮುಂದೆ ಹೋಗಿದ್ದಾನೆ. ಈ ವೇಳೆ ಸಚಿನ್ ಹಾಗೂ ಆತನ ಸಹಚರರು, ಚೇತನ್ ಮೇಲೆ ಕೈಗಳಿಂದ ಹಲ್ಲೆ ಮಾಡಿ ೭ ಲಕ್ಷ ರೂ. ಹಣಕ್ಕೆ ಬೇಡಿಕೆ ಇರಿಸಿದ್ದಾರೆ. ಹಣ ಕೊಡದಿದ್ದಲ್ಲಿ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಗೊಂಡ ಚೇತನ್ ೭ ಲಕ್ಷ ರೂ. ಹಣ ಕೊಡಲು ಒಪ್ಪಿದ್ದಾರೆ. ಬಳಿಕ ಪತ್ನಿಯ ಮೊಬೈಲ್‌ಗೆ ಕರೆ ಮಾಡಿ ಮನೆಯ ಬಳಿ ಬರುವ ವ್ಯಕ್ತಿಯೊಬ್ಬರಿಗೆ ೭ ಲಕ್ಷ ರೂ. ನಗದು ಹಣ ನೀಡುವಂತೆ ಸೂಚಿಸಿದ್ದಾರೆ. ಅದರಂತೆ ಸಚಿನ್‌ನ ಸಹಚರ ಚೇತನ್ ಮನೆಯ ಬಳಿ ತೆರಳಿ ೭ ಲಕ್ಷ ರೂ. ನಗದು ಹಣ ಪಡೆದುಕೊಂಡಿದ್ದಾರೆ. ಬಳಿಕ ತಾನೇ ಹಣ ಕೊಡುತ್ತಿರುವುದಾಗಿ ಚೇತನ್ ಅವರಿಂದ ಸ್ವಯಂ ಹೇಳಿಕೆ ಪಡೆದ. ಅದರ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದ ಆರೋಪಿಗಳು ಬಳಿಕ ಚೇತನ್ ಅವರನ್ನು ನಗರದ ವಿವಿಧೆ ರಸ್ತೆಗಳಲ್ಲಿ ಕಾರಿನಲ್ಲಿ ಸುತ್ತಾಡಿಸಿದ್ದಾರೆ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ, ನಿನ್ನ ಮತ್ತು ನಿನ್ನ ಕುಟುಂಬವನ್ನು ಮುಗಿಸಿ ಬಿಡುವುದಾಗಿ ಸಚಿನ್ ಹಾಗೂ ಆತನ ಸಹಚರರು ಬೆದರಿಕೆ ಹಾಕಿದ್ದಾರೆ. ಮಧ್ಯಾಹ್ನ ೨.೩೦ ರ ಸುಮಾರಿಗೆ ಡಾ.ರಾಜ್ ಕುಮಾರ್ ರಸ್ತೆಯ ನವರಂಗ್ ಬಾರ್ ಬಳಿ ಚೇತನ್‌ನನ್ನು ಬಿಟ್ಟು ಪರಾರಿಯಾಗಿದ್ದರು. ಬಳಿಕ ಚೇತನ್ ಅವರು ಠಾಣೆಗೆ ಬಂದು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.