ನವದೆಹಲಿ: ಟ್ವಿಟರ್ ಹಾಗೂ ಕೇಂದ್ರ ಸರ್ಕಾರ ನಡುವಿನ ಹಗ್ಗಜಗ್ಗಾಟ ಕೊನೆಗೂ ಅಂತಿಮ ಹಂತಕ್ಕೆ ಬಂದಿದ್ದು, ಭಾರತ ಸರ್ಕಾರದ ಹೊಸ ಐಟಿ ನಿಯಮಗಳನ್ನು ಪಾಲಿಸುವುದಾಗಿ ಟ್ವಿಟರ್ ಒಪ್ಪಿಕೊಂಡಿದೆ.
ಟ್ವಿಟರ್ ತನ್ನ ಬಳಕೆದಾರರ ದೂರುಗಳನ್ನು ನಿರ್ವಹಿಸಲು ಭಾರತದಲ್ಲೇ ವಾಸಿಸುವ ಅಧಿಕಾರಿಯೊಬ್ಬರನ್ನು ನೇಮಕಗೊಳಿಸಬೇಕೆಂಬ ಕೇಂದ್ರದ ನಿಯಮವನ್ನು ಪಾಲಿಸಿದ್ದು, ಅಧಿಕಾರಿಯೊಬ್ಬರನ್ನು ನೇಮಕ ಮಾಡಿದೆ. ಅಲ್ಲದೆ, ಶೀಘ್ರದಲ್ಲೇ ಇದರ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುವುದಾಗಿ ಭರವಸೆಯನ್ನು ನೀಡಿದೆ.
ಫೆಬ್ರವರಿ 25 ರಂದು ಕೇಂದ್ರ ಐಟಿ ಸಚಿವಾಲಯ ಜಾರಿಗೊಳಿಸಿದ ಇನ್ಫರ್ಮೇಷನ್ ಟೆಕ್ನಾಲಜಿ (ಇಂಟರ್ಮೀಡಿಯರಿ ಗೈಡ್ಲೈನ್ಸ್ ಅಂಡ್ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ರೂಲ್ಸ್-2021 ಅನ್ನು ಪಾಲಿಸಲು ನಿರಾಕರಿಸುತ್ತಾ ಬಂದಿತ್ತು. ಇದು ಬಳಕೆದಾರರ ಮಾಹಿತಿ ಗೌಪ್ಯತೆಗೆ ವಿರುದ್ಧವಾಗಿದೆ ಎಂದು ಸಬೂಬು ನೀಡಿತ್ತು. ಆದರೆ ಸರ್ಕಾರ ನಿಯಮ ಪಾಲಿಸದಿದ್ದರೆ, ನಿಷೇಧಿಸುವ ಎಚ್ಚರಿಕೆಯನ್ನು ನೀಡಿತ್ತು.
ಸ್ವತಃ ಟ್ವಿಟರ್ ಬಳಕೆದಾರರಾದ ಅರ್ಜಿದಾರರು ಇಬ್ಬರು ವ್ಯಕ್ತಿಗಳ ಮಾನಹಾನಿ ಮಾಡುವಂತಹ ಸುಳ್ಳು ಟ್ವೀಟ್ಗಳ ಬಗ್ಗೆ ದೂರು ನೀಡಲು ಪ್ರಯತ್ನಿಸಿದಾಗ, ಯಾವುದೇ ಅಧಿಕಾರಿಯ ವಿವರಗಳನ್ನು ಟ್ವಿಟರ್ ನೀಡಿಲ್ಲದಿರುವುದು ಕಂಡುಬಂತು ಎನ್ನಲಾಗಿದೆ.
ಟ್ವಿಟರ್ ಮಾತ್ರವಲ್ಲದೆ, ಫೇಸ್ಬುಕ್, ಗೂಗಲ್ ಹಾಗೂ ವಾಟ್ಸ್ಆ್ಯಪ್ ಕಂಪನಿಗಳು ಸಹ ಭಾರತದಲ್ಲಿ ಓರ್ವ ಅನುಸರಣಾಧಿಕಾರಿಯನ್ನು ನೇಮಕ ಮಾಡಬೇಕಿದೆ. ಈಗಾಗಲೇ ಈ ಕಂಪನಿಗಳು ಭಾರತ ಸರ್ಕಾರದ ಹೊಸ ಐಟಿ ನಿಯಮಕ್ಕೆ ಸಮ್ಮತಿಯನ್ನು ಸೂಚಿಸಿವೆ. (ಏಜೆನ್ಸೀಸ್)