ನ್ಯೂಸ್

ಪ್ರಧಾನಿಯ ವಿಡಿಯೋ ಸಂದೇಶದ ಬೆನ್ನಲ್ಲೇ ಟ್ವಿಟರ್​ನಲ್ಲಿ ಹರಿದುಬಂತು ಬಗೆಬಗೆಯ ಹಾಸ್ಯಭರಿತ ಮೀಮ್ಸ್!​

ನವದೆಹಲಿ: ಕರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಒಗ್ಗೂಡಿ ಐಕ್ಯತೆ ಪ್ರದರ್ಶಿಸಲು ಪ್ರಧಾನಿ ಮೋದಿ ಇಂದು ಬೆಳಗ್ಗೆ ವಿಡಿಯೋ ಸಂದೇಶದಲ್ಲಿ ದೇಶದ ಜನತೆಯ ಬಳಿ ಮನವಿ ಮಾಡಿದರು. ಇದಾದ ಕೆಲವೇ ಕ್ಷಣಗಳಲ್ಲಿ ಮೋದಿ ಸಂದೇಶಕ್ಕೆ ಅನುಗುಣವಾಗಿ ಟ್ವಿಟರ್​ನಲ್ಲಿ ಮೀಮ್ಸ್​ಗಳ ರೂಪದಲ್ಲಿ ಬೆಳಕಿನ ಕಿಡಿ ಹೊತ್ತಿಕೊಂಡಿದೆ.

ಏಪ್ರಿಲ್​ 5ರ ರಾತ್ರಿ 9 ಗಂಟೆಗೆ ಕೇವಲ 9 ನಿಮಿಷ ಮೀಸಲಿಡಿ. ನಿಮ್ಮ ಮನೆಯ ಎಲ್ಲ ಲೈಟ್ಸ್​ಗಳನ್ನು ಆಫ್​ ಮಾಡಿ, ಮೇಣದ ಬತ್ತಿ, ಮೊಬೈಲ್​ ಫ್ಲ್ಯಾಶ್​ಲೈಟ್​ ಹಾಗೂ ದೀಪಗಳನ್ನು ಬೆಳಗುವುದರ ಮೂಲಕ ನಾವೆಲ್ಲರೂ ಕರೊನಾ ವಿರುದ್ಧ ಹೋರಾಡುತ್ತಿದ್ದೇವೆ ಎಂಬ ಸಂದೇಶವನ್ನು ನೀಡಿ ಎಂದು ಪ್ರಧಾನಿ ಮೋದಿ ಜನರ ಬಳಿ ವಿನಂತಿಸಿಕೊಂಡಿದ್ದಾರೆ.

ಈಗಾಗಲೆ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಮಂದಿ ಪ್ರಧಾನಿ ಮೋದಿ ಸಂದೇಶವನ್ನು ವೀಕ್ಷಿಸಿದ್ದಾರೆ. ಹೀಗಾಗಿ ಏಪ್ರಿಲ್​ 5ರಂದು ನಾವು ಹೇಗೆ ಆಚರಿಸುತ್ತೇವೆ ಎಂಬುದನ್ನು ಮೀಮ್ಸ್​ ಮೂಲಕ ನೆಟ್ಟಿಗರು ವಿಭಿನ್ನವಾಗಿ ವಿವರಿಸಿದ್ದಾರೆ.

ಹ್ಯಾಪಿಡೆಂಟ್​ ಜಾಹಿರಾತು ಮತ್ತೆ ಅದ್ಧೂರಿಯಾಗಿ ಮರಳಲಿದೆ ಎಂದು ನೆಟ್ಟಿಗರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏಪ್ರಿಲ್​ 5ರ ರಾತ್ರಿ ಭಾರತೀಯರೆಲ್ಲ ಈ ರೀತಿ ಇರುತ್ತಾರೆ ಎಂದು ಫೋಟೋ ಮೂಲಕ ಮತ್ತೋರ್ವ ನೆಟ್ಟಿಗ ಚಿತ್ರೀಕರಿಸಿದ್ದಾರೆ. ನಮ್ಮ ಮೆಚ್ಚಿನ ಪ್ರಧಾನಿ ಮೋದಿ 5ರ ರಾತ್ರಿ ಲೈಟ್​ ಶೋ ಆಯೋಜಿಸಿದ್ದಾರೆ ಎಂದು ಇನ್ನೋರ್ವ ಕಿಚಾಯಿಸಿದ್ದು, ಹೀಗೆ ನಾನಾ ರೀತಿಯಲ್ಲಿ ಪ್ರಧಾನಿ ಸಂದೇಶವನ್ನು ನೆಟ್ಟಿಗರು ವೈರಲ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​)