ನ್ಯೂಸ್

ಕೋವಿಡ್​ ವಿರುದ್ಧ ಹೋರಾಡಲು ಭಾರತಕ್ಕೆ 15 ಮಿಲಿಯಲ್​ ಡಾಲರ್​ ದೇಣಿಗೆ ನೀಡಿದ ಟ್ವಿಟರ್​

ನವದೆಹಲಿ: ಮಹಾಮಾರಿ ಕರೊನಾ ವೈರಸ್​ ಎರಡನೇ ಅಲೆಯಿಂದ ತತ್ತರಿಸಿ ಹೋಗಿರುವ ಭಾರತ ಕೋವಿಡ್​ ವಿರುದ್ಧ ಸಮರ್ಥವಾಗಿ ಹೋರಾಡಲು ಸಾಮಾಜಿಕ ಜಾಲತಾಣ ದೈತ್ಯ ಕಂಪನಿ ಟ್ವಿಟರ್​ 15 ಮಿಲಿಯನ್​ ಡಾಲರ್ (1,10,20,50,000 ರೂಪಾಯಿ)​ ದೇಣಿಗೆಯನ್ನು ನೀಡಿದೆ.

ಟ್ವಿಟರ್​ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜಾಕ್​ ಪ್ಯಾಟ್ರಿಕ್​ ಡೋರ್ಸೆ ಸೋಮವಾರ ಟ್ವೀಟ್​ ಮಾಡಿದ್ದು, 15 ಮಿಲಿಯನ್​ ಡಾಲರ್​ ಅನ್ನು ದೇಶದ ಮೂರು ಸರ್ಕಾರೇತರ ಸಂಸ್ಥೆಗಳು (ಕೇರ್​), ನೆರವು ಭಾರತ ಮತ್ತು ಸೇವಾ ಇಂಟರ್ನ್ಯಾಷನಲ್ ಯುಎಸ್ಎಗೆ ನೀಡಿರುವುದಾಗಿ ತಿಳಿಸಿದ್ದಾರೆ.

ಎನ್​ಜಿಒ ಕೇರ್​ಗೆ 10 ಮಿಲಿಯನ್​ ಡಾಲರ್​ ನೀಡಲಾಗಿದ್ದು, ನೆರವು ಭಾರತ ಮತ್ತು ಸೇವಾ ಇಂಟರ್ನ್ಯಾಷನಲ್ ಯುಎಸ್ಎ ತಲಾ 2.5 ಮಿಲಿಯನ್​ ಡಾಲರ್​ ಸ್ವೀಕರಿಸಿದೆ. ಸೇವಾ ಇಂಟರ್ನ್ಯಾಷನಲ್, ಹಿಂದೂ ನಂಬಿಕೆ ಆಧಾರಿತ, ಮಾನವೀಯ ಮತ್ತು ಲಾಭರಹಿತ ಸೇವಾ ಸಂಸ್ಥೆಯಾಗಿದೆ.

ಆಮ್ಲಜನಕ ಸಾಂದ್ರಕಗಳು, ವೆಂಟಿಲೇಟರ್​ಗಳು, ಬೈಪ್ಯಾಪ್​ (ಬಿಲೆವೆಲ್​ ಪಾಸಿಟಿವ್​ ಏರ್​ವೇ ಪ್ರೆಸ್ಸರ್​) ಮತ್ತು ಸಿಪಿಎಪಿ (ಕಂಟಿನ್ಯೂಸ್​ ಪಾಸಿಟಿವ್​ ಏರ್​ವೇ ಪ್ರೆಸ್ಸರ್​) ಸೇರಿದಂತೆ ಮುಂತಾದ ಜೀವ ಉಳಿಸುವ ಉಪಕರಣಗಳ ಸಂಗ್ರಹಕ್ಕೆ ಬೆಂಬಲವಾಗಿ ಟ್ವಿಟರ್​ ಈ ಅನುದಾನವನ್ನು ನೀಡಿದೆ.

"ಕೋವಿಡ್​ ವಿರುದ್ಧದ ಭಾರತ ಹೋರಾಟಕ್ಕೆ ನೆರವು" ಅಭಿಯಾನದ ಅಡಿ ಸೇವಾ ಇಂಟರ್ನ್ಯಾಷನಲ್ ಹಣ ಸಂಗ್ರಹಿಸಲಾಗಿದೆ ಎಂದು ಸ್ಯಾನ್​ ಫ್ರ್ಯಾನ್ಸಿಸ್ಕೋ ಮೂಲದ ದೈತ್ಯ ಕಂಪನಿಯಾದ ಟ್ವಿಟರ್​ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಸರ್ಕಾರಿ ಆಸ್ಪತ್ರೆಗಳು ಮತ್ತು ಕೋವಿಡ್ -19 ಆರೈಕೆ ಕೇಂದ್ರಗಳು ಮತ್ತು ಆಸ್ಪತ್ರೆಗಳಿಗೆ ಉಪಕರಣಗಳನ್ನು ವಿತರಿಸಲಾಗುವುದು ಎಂದು ಟ್ವಿಟರ್ ಹೇಳಿದೆ. (ಏಜೆನ್ಸೀಸ್​)