ಬೆಂಗಳೂರು: ವಿಚಿತ್ರ ಹಾಗೂ ಕುತೂಹಲದ ಬೆಳವಣಿಗೆಯೊಂದರಲ್ಲಿ ಸಂಸದ ಅನಂತಕುಮಾರ್ ಹೆಗಡೆ ಅವರ ಟ್ವಿಟರ್ ಖಾತೆಯನ್ನು ಖುದ್ದು ಟ್ವಿಟರೇ ಲಾಕ್ ಮಾಡಿಬಿಟ್ಟಿದೆ. ಈ ಬಗ್ಗೆ ಹೆಗಡೆ ಅವರಿಗೆ ನೋಟಿಸ್ ಕಳುಹಿಸಿರುವ ಟ್ವಿಟ್ಟರ್, ‘ನಿಮ್ಮ ಖಾತೆ ನಮ್ಮ ಕೆಲವು ನಿಯಮಗಳನ್ನು ಉಲ್ಲಂಘಿಸಿದ್ದು, ಖಾತೆಯನ್ನು ಕ್ಲೋಸ್ ಮಾಡುತ್ತಿದ್ದೇವೆ’ ಎಂದಿದೆ.
ಅಷ್ಟಕ್ಕೂ ಅನಂತ್‌ಕುಮಾರ್ ಹೆಗಡೆಯವರು ಮಾಡಬಾರದ್ದು ಏನು ಮಾಡಿದರು ಎಂದು ಕೇಳುವಿರಾ? ಅವರು ಕರೊನಾ ವೈರಸ್‌ಗೆ ಕಾರಣವಾಗಿರುವ ಕೆಲವು ತಬ್ಲಿಘಿಗಳ ಕುರಿತಂತೆ ಕೆಲವೊಂದು ಬರಹಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದರು. ತಬ್ಲಿಘಿಗಳಿಂದಲೇ ಕರೊನಾ ಹರಡುತ್ತಿದೆ ಎಂಬ ಅರ್ಥದಲ್ಲಿ ನಾಲ್ಕು ದೀರ್ಘವಾಗಿರುವ ಬರಹಗಳು ಅವರ ಖಾತೆಯಲ್ಲಿ ಪ್ರಕಟಗೊಂಡಿದ್ದವು. ಏಪ್ರಿಲ್ 8ರಿಂದ ಈ ಬರಹ ಬರೆಯಲು ಶುರು ಮಾಡಿದ್ದರು.
ಈ ಹಿನ್ನೆಲೆಯಲ್ಲಿ, ಟ್ವಿಟರ್ ಖಾತೆಯು ನಿಯಮ ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದ್ದು, ಅದನ್ನು ಲಾಕ್ ಮಾಡಲಾಗಿದೆ. ಅಷ್ಟಕ್ಕೂ ಪುನಃ ಖಾತೆ ತೆರೆಯಬೇಕು ಎಂದರೆ ತಬ್ಲಿಘಿ ವಿರುದ್ಧದ ಬರಹಗಳನ್ನು ಖಾತೆಯಿಂದ ಡಿಲೀಟ್ ಮಾಡುವ ಬೇಡಿಕೆಯನ್ನು ಟ್ವಿಟರ್ ಅನಂತ್‌ಕುಮಾರ್ ಅವರ ಮುಂದಿಟ್ಟಿದೆ. ಒಂದು ವೇಳೆ ಬರಹಗಳ ಡಿಲೀಟ್ ಆದರಷ್ಟೇ ಪುನಃ ಖಾತೆಯನ್ನು ಮರಳಿಸಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
2016ರಿಂದ ಅವರು ಟ್ವಿಟರ್‌ನಲ್ಲಿ ಸಕ್ರಿಯವಾಗಿರುವ ಅನಂತ್‌ಕುಮಾರ್ ಹೆಗಡೆ ಅವರು, ವೆರಿಫೈಡ್ ವಿಐಪಿ ಖಾತೆ ಹೊಂದಿದ್ದಾರೆ. ಅವರಿಗೆ ಟ್ವಿಟರ್‌ನಲ್ಲಿ 74,300 ಬೆಂಬಲಿಗರು ಇದ್ದಾರೆ.
ಟ್ವಿಟರ್ ಕ್ರಮಕ್ಕೆ ತೀವ್ರ ಕಿಡಿ ಕಾರಿರುವ ಹೆಗಡೆಯವರು, ತಮ್ಮ ಫೇಸ್‌ಬುಕ್ ಖಾತೆಯಲ್ಲಿ, ಟ್ವಿಟರ್‌ನ ಭಾರತ ವಿರೋಧಿ ನೀತಿ ಮತ್ತೊಮ್ಮೆ ಬಯಲಾಗಿದೆ’ ಎಂಬ ಶೀರ್ಷಿಕೆಯೊಂದಿಗೆ, ‘ಟ್ವಿಟ್ಟರ್ ಭಾರತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಭಾರತದ ವಿರುದ್ಧ ಷಡ್ಯಂತರ ಹಾಗೂ ಭಾರತವನ್ನು ಒಡೆಯುವ ಟ್ವೀಟ್‌ಗಳನ್ನು ಪ್ರಚಾರ ಮಾಡುವ ಉದ್ಯಮವನ್ನು ಟ್ವಿಟ್ಟರ್ ಮಾಡುತ್ತಿದೆ ಎಂದಿದ್ದಾರೆ.’ ಕೆಲವು ದಿನಗಳ ಹಿಂದೆ ಗುರುಪಟವಂತ ಸಿಂಘ್ ಪನ್ನೂನ್ ಎಂಬ ಟ್ವಿಟ್ಟರ್ ಖಾತೆಯಿಂದ ಪಂಜಾಬ್ ರಾಜ್ಯವನ್ನು ಭಾರತದಿಂದ ಸ್ವಾತಂತ್ರಗೊಳಿಸಿ, ಖಲಿಸ್ಥಾನ ಎಂಬ ಪ್ರತ್ಯೇಕ ರಾಷ್ಟ್ರವನ್ನಾಗಿಸುವುದರ ಬಗ್ಗೆ ಟ್ವೀಟ್ ಮಾಡಿದ್ದು, ಅದನ್ನು ಟ್ವಿಟ್ಟರಿಗೆ ಹಣಪಾವತಿಸಿ ಜಾಹೀರಾತು ನೀಡಿದ್ದಾರೆ. ಇದು ಭಾರತದ ವಿರುದ್ಧ ನಡೆಸುತ್ತಿರುವ ಜಾಹೀರಾತಾಗಿದ್ದು, ಇದನ್ನು ಟ್ವಿಟ್ಟರ್ ಅನುಮೋದಿಸಿ ಜಾಹೀರಾತನ್ನು ಪ್ರಚಾರ ಪಡೆಸಿದೆ. ಇಂತಹ ರಾಷ್ಟ್ರವಿರೋಧ ಚಟುವಟಿಕೆಯನ್ನು ಬಯಲು ಮಾಡಿ, ಪ್ರಧಾನಿ ಹಾಗೂ ಗೃಹ ಸಚಿವರ ಗಮನಕ್ಕೆ ನಾನು ತಂದಿದ್ದರ ಪರಿಣಾಮವಾಗಿ, ಏಪ್ರಿಲ್ 22ರಂದು ತಬ್ಲಿಘಿ ಜಮಾತ್ ನ ವಿರುದ್ಧ ನಾನು ಮಾಡಿರುವ ಟ್ವೀಟಿನ ನೆಪವಿಟ್ಟುಕೊಂಡು ನನ್ನ ಟ್ವಿಟ್ಟರ್ ಖಾತೆಯನ್ನು ರದ್ದು ಮಾಡಿದ್ದಾರೆ. ಬದಲಾಗಿ ನಾನು ಮಾಡಿರುವ ಟ್ವೀಟ್ ನ್ನು ತೆಗೆದುಹಾಕಿದಲ್ಲಿ ನನ್ನ ಖಾತೆಯಬನ್ನು ಪುನಃ ಸಕ್ರಿಯಗೊಳಿಸುವುದಾಗಿ ಹೇಳಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
ದೇಶದ ವಿರುದ್ಧ ನಡೆಯುವ ಯಾವುದೇ ನಡೆಯನ್ನು ಅದು ಯಾರೇ ಇರಲಿ, ನನ್ನ ವಿರೋಧವನ್ನು ನಾನು ವ್ಯಕ್ತಪಡಿಸುತ್ತಾ ಬಂದಿದ್ದೇನೆ. ಇದರಲ್ಲಿ ಯಾವುದೇ ರಾಜಿ ಇಲ್ಲಾ. ಈ ನಿಟ್ಟಿನಲ್ಲಿ ನಾನು ಮಾಡಿರುವ ಟ್ವೀಟನ್ನು ಅಳಿಸುವ ಪ್ರಶ್ನೆಯೇ ಇಲ್ಲ. ಅದರಲ್ಲಿ ಟ್ವಿಟ್ಟರ್ ನಡೆಸುತ್ತಿರುವ ಭಾರತ ವಿರೋಧಿ ಪ್ರಚಾರಗಳನ್ನು ನಾನು ಅತ್ಯಂತ ತೀವ್ರವಾಗಿ ಖಂಡಿಸುತ್ತೇನೆ. ದೇಶ ವಿರೋಧಿ ಸಾಮಾಜಿಕ ಜಾಲತಾಣದ ಅಕೌಂಟಿಗಿಂತ ನನ್ನ ದೇಶ, ನನ್ನ ಸಿದ್ಧಾಂತ ನನ್ನ ಜೀವನದ ಆದ್ಯತೆ’ ಎಂದಿದ್ದಾರೆ.