ನ್ಯೂಸ್

ತನ್ನನ್ನೇ ತಾನು ಅಪಹರಣ ಮಾಡಿಕೊಂಡ ಈ ಯುವಕ! ಕಾರಣ ಮಾತ್ರ ಬಲು ವಿಚಿತ್ರ...

ನವದೆಹಲಿ: ಮೊನ್ನೆ ಅಂದರೆ 5ನೇ ತಾರೀಖು ದೆಹಲಿಯ ವಾಜಿರಾಬಾದ್ ಪೊಲೀಸರಿಗೊಂದು ಕರೆ ಬಂತು. ಅದೇನೆಂದರೆ ರಾಮ್‌ಘಾಟ್ ನಿವಾಸಿ ಮುದಾಸೀರ್‌ ಕರೆ ಮಾಡಿ ತನ್ನ ಸೋದರಳಿಯ ಸಲ್ಮಾನ್‌ ಖಾನ್‌ನನ್ನು ಅಪಹರಣ ಮಾಡಲಾಗಿದೆ. ಆತನನ್ನು ಬಿಡುಗಡೆ ಮಾಡಬೇಕಿದ್ದರೆ ಐದು ಲಕ್ಷ ರೂಪಾಯಿ ಬೇಡಿಕೆ ಒಡ್ಡಲಾಗುತ್ತಿದೆ. ಇಲ್ಲದಿದ್ದರೆ ಅವನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದರು.

ಪೇಂಟರ್‌ ಆಗಿರುವ ಸಲ್ಮಾನ್‌ನಲ್ಲು ನಾಲ್ವರು ಬಂದು ಅಪಹರಿಸಿಕೊಂಡು ಹೋಗಿದ್ದಾರೆ. ಈ ಕುರಿತು ಸ್ವತಃ ಸಲ್ಮಾನ್‌ ತನ್ನ ಸಹೋದರ ಅರ್ಷದ್‌ನನ್ನು ಅಮ್ರೋಹಾಗೆ ಕರೆ ಮಾಡಿ ಈ ವಿಷಯ ತಿಳಿಸಿದ್ದಾನೆ. ಐದು ಲಕ್ಷ ರೂಪಾಯಿ ಕೊಟ್ಟರೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರಂತೆ. ದಯವಿಟ್ಟು ಆತನನ್ನು ಹುಡುಕಿಕೊಡಿ ಎಂದು ಫೋನ್‌ನಲ್ಲಿ ಹೇಳಲಾಯಿತು.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸಲ್ಮಾನ್‌ನನ್ನು ಹುಡುಕಲು ಮೂರು ತಂಡ ರಚಿಸಿದರು. ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಲು ಒಂದು ತಂಡವನ್ನು ನಿಯೋಜಿಸಲಾಯಿತು ಮತ್ತು ಅಪಹರಣಕ್ಕೊಳಗಾದ ವ್ಯಕ್ತಿಯ ಸ್ಥಳವನ್ನು ಪಡೆಯಲು ಇತರ ಎರಡು ತಂಡಗಳನ್ನು ಕಳುಹಿಸಿಕೊಡಲಾಯಿತು.

ಸಲ್ಮಾನ್‌ ಕರೆ ಮಾಡಿರುವ ದೂರವಾಣಿಯ ಮಾರ್ಗವನ್ನು ಅನುಸರಿಸಿ ಎಸ್‌ಐ ರೋಹಿತ್ ನೇತೃತ್ವದ ಪೊಲೀಸ್ ತಂಡವನ್ನು ಗಾಜಿಯಾಬಾದ್‌ಗೆ ಕಳುಹಿಸಲಾಯಿತು. ಆ ವೇಳೆಗೆ ಸಲ್ಮಾನ್‌ ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ಆನಂದ್‌ ವಿಹಾರ್‌ ಬಳಿ ಹೋಗುತ್ತಿದ್ದಂತೆಯೇ ಪೊಲೀಸರಿಗೆ ಸಲ್ಮಾನ್‌ ಒಂದು ಕಡೆ ಕುಳಿತಿರುವುದು ಕಂಡಿತು.

ಸಂದೇಹಗೊಂಡ ಪೊಲೀಸರು ಆತನ ಬಳಿ ವಿಚಾರಿಸಿದರು. ಪೊಲೀಸರು ಬರುವ ಸೂಚನೆಯೇ ಇಲ್ಲದಿದ್ದ ಸಲ್ಮಾನ್‌ ಗೊಂದಲಕ್ಕೀಡಾಗಿ ಅಪಹರಣಕಾರರು ತನ್ನನ್ನು ಇಲ್ಲಿ ಬಿಟ್ಟುಹೋಗಿರುವುದಾಗಿ ಹೇಳಿದ. ಆದರೆ ಪೊಲೀಸರಿಗೆ ಬಲವಾದ ಅನುಮಾನ ಬಂದು ತಮ್ಮದೇ ಆದ ರೀತಿಯಲ್ಲಿ ವಿಚಾರಿಸಿದರು.

ಆಗ ಸಲ್ಮಾನ್‌ ಸತ್ಯ ಬಾಯಿಬಿಟ್ಟ. ತನ್ನನ್ನು ಯಾರೂ ಅಪಹರಣ ಮಾಡಲಿಲ್ಲ. ನಾನೇ ನಾಟಕವಾಡಿದೆ. ನನ್ನ ಸಹೋದರಿ ಮದುವೆ ಮಾಡಬೇಕಾಗಿದೆ. ಅದಕ್ಕಾಗಿ ಐದು ಲಕ್ಷ ರೂಪಾಯಿ ಬೇಕು. ನನ್ನ ಚಿಕ್ಕಪ್ಪನ ಬಳಿ ಹಣವಿದೆ. ಆದರೆ ಆತ ಕೊಡುವುದಿಲ್ಲ. ಅದಕ್ಕಾಗಿ ಆತನಿಂದ ಹಣ ವಸೂಲಿ ಮಾಡಲು ಈ ನಾಟಕವಾಡಿದೆ ಎಂದು ಒಪ್ಪಿಕೊಂಡ.

ಸದ್ಯ ಆತನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.