ನ್ಯೂಸ್

ಭಾರಿ ಸ್ಕಾಲರ್​ಶಿಪ್​ ಪಡೆದು ಅಮೆರಿಕದಲ್ಲಿ ಕಲಿಯುತ್ತಿದ್ದ ಯುವತಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್​; ಕುಟುಂಬದವರೇ ಕತೆ ಕಟ್ಟಿದರಾ..?

ಬುಲಂದ್​ಶಹರ್​ (ಉತ್ತರಪ್ರದೇಶ): ಎರಡು ವರ್ಷಗಳ ಹಿಂದೆ ಪಿಯು ಪರೀಕ್ಷೆ ಹೆಚ್ಚು ಅಂಕ ಗಳಿಸಿ ಅದರ ಆಧಾರದಲ್ಲಿಯೇ ಅಮೆರಿಕದ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿದ್ದ ಯುವತಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ.

ಸುಧೀಕ್ಷಾ ಭಾಟಿ ತನ್ನ ಚಿಕ್ಕಪ್ಪ ಹಾಗೂ ಹಾಗೂ ಕಸಿನ್​ ಜತೆ ಪ್ರತ್ಯೇಕ ಬೈಕ್​ನಲ್ಲಿ ತೆರಳುತ್ತಿದ್ದಾಗ ಬೈಕ್​ನಲ್ಲಿ ಬಂದ ಇಬ್ಬರು ಆಗಂತುಕರು ಆಕೆಯನ್ನು ಹಿಂಬಾಲಿಸಿ ಅಡ್ಡಗಟ್ಟಿದ್ದಾರೆ. ಬೈಕ್​ ನಿಲ್ಲಿಸುವ ಭರದಲ್ಲಿ ಆಕೆ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿತ್ತು. ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಭಾರಿ ಒತ್ತಾಯ ಕೇಳಿ ಬಂದಿತ್ತು. ಸೋಷಿಯಲ್​ ಮೀಡಿಯಾದಲ್ಲಂತೂ ಪೊಲೀಸರನ್ನು ಹಿಗ್ಗಮುಗ್ಗಾ ತರಾಟೆಗೆ ತೆಗೆದುಕೊಳ್ಳಲಾಗಿತ್ತು.

ಇದನ್ನೂ ಓದಿ; ಹಿಂದು ಉತ್ತರಾಧಿಕಾರ ಕಾಯ್ದೆ ಪೂರ್ವಾನ್ವಯವಾಗುತ್ತೆ; ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಸಮಾನ ಅಧಿಕಾರ

ಆದರೆ, ವಾಸ್ತವಾಂಶವೇ ಬೇರೆಯಾಗಿತ್ತು. ಅಪಘಾತ ನಡೆದ ಸಮಯದಲ್ಲಿ ಆಕೆಯ ಚಿಕ್ಕಪ್ಪ ಅಲ್ಲಿರಲೇ ಇಲ್ಲ. ಅವರು ಅಲ್ಲಿಗೆ ಎರಡು ತಾಸಿನ ಬಳಿಕವಷ್ಟೇ ಬಂದಿದ್ದಾರೆ. ಇತ್ತೀಚೆಗಷ್ಟೇ 10ನೇ ತರಗತಿ ಪಾಸಾಗಿದ್ದ ಆಕೆಯ ಕಸಿನ್​ ಬೈಕ್​ ಚಲಾಯಿಸುತ್ತಿದ್ದ. ಅವರನ್ನು ಯಾರೂ ಹಿಂಬಾಲಿಸಿ ಕಿರುಕುಳ ನೀಡಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಅಮೆರಿಕದ ಮೆಸಾಚುಸೆಟ್ಸ್​ನ ಬಾಬ್ಸ್​ನ್​ ಕಾಲೇಜಿನಲ್ಲಿ ಸುಧೀಕ್ಷಾ ವ್ಯಾಸಂಗ ಮಾಡುತ್ತಿದ್ದಳು. ಇದಕ್ಕಾಗಿ ಆಕೆಗೆ ದೊಡ್ಡ ಮೊತ್ತದ ಸ್ಕಾಲರ್​ಶಿಪ್​ ದೊರೆತಿತ್ತು. ಇದನ್ನೇ ಆಕೆಯ ಕುಟುಂಬದವರು ಜೀವವಿಮಾ ಮೊತ್ತ ಎಂದು ನಂಬಿಕೊಂಡಿದ್ದರು. ಇದೇ ಕುಟುಂಬದವರ ದಿಕ್ಕು ತಪ್ಪಿಸಿತ್ತು.

ಆಕೆ ಮೃತಪಟ್ಟಿದ್ದರಿಂದ ಇದು ನಿರ್ಲಕ್ಷ್ಯದಿಂದಾದ ಅಪಘಾತವಲ್ಲ, ಬದಲಾಗಿ ಯುವಕರಿಬ್ಬರ ಕಿರುಕುಳದಿಂದಾದ ಅಪಘಾತ ಎಂದು ಬಿಂಬಿಸಿದ್ದರು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.