ನ್ಯೂಸ್

ಪಿಯುಸಿಯಲ್ಲಿ ಈ ಅವಳಿಗಳು ಮಾಡಿದರೊಂದು ಅಚ್ಚರಿ!

suchetana

ನವದೆಹಲಿ: ಮೊನ್ನೆ ದ್ವಿತೀಯ ಪಿಯುಸಿಯ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ದೆಹಲಿಯ ನೋಯ್ಡಾ ನಿವಾಸಿಗಳಾಗಿರುವ ಈ ಅವಳಿ ಸಹೋದರರು ಸಕತ್‌ ಫೇಮಸ್‌ ಆಗಿದ್ದಾರೆ.

ನೋಡಲು ಥೇಟ್‌ ಒಂದೇ ತೆರನಾಗಿ ಇರುವ ಈ ಅವಳಿ ಬಾಲಕಿಯರು ಅತಿ ಹೆಚ್ಚಿನ ಅಂಕ ಪಡೆದುದಕ್ಕೆ ಫೇಮಸ್‌ ಆಗಿದ್ದಲ್ಲ, ಬದಲಿಗೆ ಅಂಕಗಳನ್ನೂ ಒಂದೇ ರೀತಿ ತೆಗೆದಿರುವುದು ಎಲ್ಲರನ್ನೂ ಅಚ್ಚರಿಗೊಳಿಸಿದೆ.

ಮಾನಸಿ ಮತ್ತು ಮಾನ್ಯ ಎಂಬ ಸಹೋದರಿಯರು ಇವರು. ಗ್ರೇಟರ್ ನೋಯ್ಡಾದ ಆ್ಯಸ್ಟರ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳಾಗಿದ್ದು, ಸಿಬಿಎಸ್‌ಇ ದ್ವಿತೀಯ ಪಿಯುಸಿಯಲ್ಲಿ ಶೇ.95.8ರಷ್ಟು ಅಂಕ ಪಡೆದಿದ್ದಾರೆ. ಇಬ್ಬರೂ ಸೇಮ್‌ ಇಷ್ಟೇ ಅಂಕ ಪಡೆದಿರುವುದು ಅಚ್ಚರಿ ಮೂಡಿಸಿದೆ.

ಅಷ್ಟೇ ಅಲ್ಲದೇ, ಇಂಗ್ಲಿಷ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಷಯಗಳಲ್ಲಿ ಇಬ್ಬರೂ 98 ಅಂಕ ಪಡೆದಿದ್ದರೆ, ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ದೈಹಿಕ ಶಿಕ್ಷಣದಲ್ಲಿ ಇಬ್ಬರೂ 95 ಅಂಕ ಪಡೆದಿದ್ದಾರೆ.

ಬಹುತೇಕ ಎಲ್ಲರೂ ನಮ್ಮ ಮುಖಚಹರೆಯಿಂದ ಗುರುತಿಸಲು ಕಷ್ಟಪಡುತ್ತಾರೆ. ಒಂದೇ ರೀತಿಯಾಗಿ ಇರುವುದಾಗಿ ಹೇಳುತ್ತಾರೆ. ಆದರೆ ಇದೀಗ ಉತ್ತಮ ಅಂಕ ಗಳಿಸಿರುವ ಖುಷಿ ಒಂದೆಡೆಯಾದರೆ, ಇಬ್ಬರಿಗೂ ಒಂದೇ ತೆರನಾದ ಅಂಕ ಬಂದಿರುವುದು ನಮಗೇ ಅಚ್ಚರಿ ಮೂಡಿಸಿದೆ ಜತೆಗೆ ಸಂತೋಷವೂ ಆಗಿದೆ ಎಂದಿದ್ದಾರೆ.

ಮಾನ್ಯ ನನಗಿಂತ ಹೆಚ್ಚಿಗೆ ಓದಿದ್ದಳು. ಆದ್ದರಿಂದ ಅವಳಿಗೆ ನನಗಿಂತಲೂ ಹೆಚ್ಚು ಅಂಕ ಬರುತ್ತದೆ ಎಂದುಕೊಂಡಿದ್ದೆ ಎನ್ನುತ್ತಾಳೆ ಮಾನಸಿ. ಅವಳಿಗಳು ಹೆಚ್ಚಿನ ಪಕ್ಷದಲ್ಲಿ ಒಂದೇ ರೀತಿ ಅಂಕ ಪಡೆಯುತ್ತಾರೆ ಎಂದು ಪುಸ್ತಕದಲ್ಲಿ ಓದಿದ್ದೆ. ಆದರೆ ಇದನ್ನು ನಂಬಿರಲಿಲ್ಲ. ನಿಜಕ್ಕೂ ಇದು ಅಚ್ಚರಿಯೇ ಸರಿ ಎನ್ನುತ್ತಾರೆ ಸಹೋದರಿಯರು. ಇವರಿಬ್ಬರಿಗೂ ಇಂಜಿನಿಯರಿಂಗ್ ಮಾಡುವ ಆಸೆ. (ಏಜೆನ್ಸೀಸ್‌)