ನ್ಯೂಸ್

ಪಾಕ್​​ ದಾಳಿಯಲ್ಲಿ ಅವಳಿ ಮಕ್ಕಳು ಬಲಿ, ತಂದೆ ಸಾವು ಬದುಕಿನ ನಡುವೆ ಹೋರಾಟ, ಇಡೀ ಕುಟುಂಬವೇ ನಾಶ | Kashmir

Kashmir: ಜಮ್ಮು ಮತ್ತು ಕಾಶ್ಮೀರದ ಪೂಂಚ್​​ನಲ್ಲಿ ಪಾಕಿಸ್ತಾನದಿಂದ ಬಂದ ಶೆಲ್ ಮನೆಯ ಮೇಲೆ ಬಿದ್ದು ಇಡೀ ಕುಟುಂಬವನ್ನೇ ನಾಶಮಾಡಿದ ಘಟನೆ ನಡೆದಿದೆ. ಈ ದಾಳಿಯಲ್ಲಿ 12 ವರ್ಷದ ಅವಳಿ ಸಹೋದರ ಮತ್ತು ಸಹೋದರಿ ಜೋಯಾ ಮತ್ತು ಅಯಾನ್ ಸಾವನ್ನಪ್ಪಿದ್ದಾರೆ. ಪಾಕಿಸ್ತಾನ ಸೇನೆಯ ತೀವ್ರ ಶೆಲ್ ದಾಳಿಯ ನಡುವೆ ನಡೆದ ಈ ದಾಳಿಯಲ್ಲಿ ಅವರ ಚಿಕ್ಕಮ್ಮ ಮತ್ತು ಚಿಕ್ಕಪ್ಪ ಕೂಡ ಪ್ರಾಣ ಕಳೆದುಕೊಂಡಿದ್ದಾರೆ.

ಕಳೆದ ತಿಂಗಳು ತಮ್ಮ 12ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಅವಳಿಗಳು ಮೇ 7 ರಂದು ನಿಧನರಾಗಿದ್ದಾರೆ. ಉತ್ತಮ ಶೈಕ್ಷಣಿಕ ಅವಕಾಶಗಳನ್ನು ಹುಡುಕುತ್ತಾ ಅವರ ಕುಟುಂಬವು ಕೇವಲ ಎರಡು ತಿಂಗಳ ಹಿಂದೆ ಪೂಂಚ್‌ಗೆ ಬಂದಿತ್ತು.

ಅವರ ತಂದೆ, 48 ವರ್ಷದ ರಮೀಜ್ ಖಾನ್, ಶೆಲ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಈಗ ಅವರನ್ನು ಜಮ್ಮುವಿನ ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಿಸಲಾಗಿದೆ. ತಮ್ಮ ಮಕ್ಕಳ ಸಾವಿನ ಬಗ್ಗೆ ತಿಳಿಯದೆ, ಅವರು ತಮ್ಮ ಜೀವನಕ್ಕಾಗಿ ಹೋರಾಡುತ್ತಿದ್ದಾರೆ.

ತಾಯಿ ಉರ್ಷಾ ಖಾನ್ ಮಾನಸಿಕವಾಗಿ ಕುಸಿದಿದ್ದಾರೆ. ಒಂದೆಡೆ ತಾಯಿಯ ನೋವು, ಮತ್ತೊಂದೆಡೆ ಐಸಿಯುನಲ್ಲಿ ದಾಖಲಾಗಿರುವ ಗಂಡನನ್ನು ನೋಡಿಕೊಳ್ಳುವುದು. ಜೋಯಾ ಮತ್ತು ಅಯಾನ್ ತುಂಬಾ ಬುದ್ಧಿವಂತ ಮತ್ತು ಪ್ರೀತಿಯ ಮಕ್ಕಳಾಗಿದ್ದರು ಎಂದು ಕುಟುಂಬದ ನಿಕಟ ಸಂಬಂಧಿಗಳಾದ ಮಾರಿಯಾ ಮತ್ತು ಸೊಹೈಲ್ ಖಾನ್ ಹೇಳಿದರು.

ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಾದ್ಯಂತ ಒಂಬತ್ತು ಭಯೋತ್ಪಾದಕ ಸಂಬಂಧಿತ ತಾಣಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರಅನ್ನು ನಡೆಸಿತು. ಒಬ್ಬ ನೇಪಾಳಿ ಪ್ರಜೆ ಸೇರಿದಂತೆ 26 ಜನರನ್ನು ಬಲಿತೆಗೆದುಕೊಂಡ ಕ್ರೂರ ಪಹಲ್ಗಾಮ್ ದಾಳಿಯ ನಂತರ ಈ ನಿರ್ಣಾಯಕ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಾಚರಣೆಯ ಸಮಯದಲ್ಲಿ ಸುಮಾರು 100 ಭಯೋತ್ಪಾದಕರನ್ನು ಮಟ್ಟಹಾಕಲಾಗಿದೆ ಎಂದು ಸೇನೆ ದೃಢಪಡಿಸಿದೆ. (ಏಜೆನ್ಸೀಸ್​)