ನ್ಯೂಸ್

ಕೊರೊನಾಕ್ಕೆ ಪ್ಲಾಸ್ಮಾ ಟ್ರೀಟ್​ಮೆಂಟ್​: ದಾನಕ್ಕೆ ಮುಂದಾದರು ಕೊರೊನಾದಿಂದ ಗುಣಮುಖರಾಗಿರುವ ಚೀನೀಯರು

ಶಾಂಘೈ: ಕೊರೊನಾ ವೈರಸ್​ನಿಂದಾಗಿ ಬರುವ ರೋಗವನ್ನು ಮನುಷ್ಯನ ದೇಹದಲ್ಲಿರುವ ಪ್ಲಾಸ್ಮಾದಿಂದ ಬಹುಬೇಗ ಗುಣಪಡಿಸಬಹುದು. ಇದೀಗ ಚೀನಾದಲ್ಲಿ ಕೊರೊನಾ ರೋಗಕ್ಕೆ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಜನರು ಇತರೆ ರೋಗಿಗಳಿಗೆ ತಮ್ಮ ಪ್ಲಾಸ್ಮಾವನ್ನು ದಾನ ಮಾಡಲು ಮುಂದಾಗಿದ್ದಾರೆ.

ವುಹಾನ್​ನಲ್ಲಿ ಕೊರೊನಾಕ್ಕೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಈಗಾಗಲೇ ಗುಣಮುಖರಾಗಿರುವ ರೋಗಿಗಳು ತಮ್ಮ ದೇಹದ ಪ್ಲಾಸ್ಮಾವನ್ನು ದಾನ ಮಾಡುವುದಾಗಿ ತಿಳಿಸಿದ್ದಾರೆ. ತಮಗೆ ಚಿಕಿತ್ಸೆ ನೀಡಲಾಗುತ್ತಿದ್ದ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಯ ಪ್ಲಾಸ್ಮಾದಿಂದ ಈ ರೋಗ ಬೇಗ ಗುಣವಾಗುತ್ತದೆ ಎಂದು ತಿಳಿದುಕೊಂಡಿದ್ದು ಅದಕ್ಕಾಗಿಯೇ ತಾವು ಪ್ಲಾಸ್ಮಾ ದಾನ ಮಾಡುವ ನಿರ್ಧಾರ ಮಾಡಿರುವುದಾಗಿ ಅವರು ತಿಳಿಸಿದ್ದಾರೆ. ಸುಮಾರು 20 ಜನರು ಪ್ಲಾಸ್ಮಾ ದಾನಕ್ಕೆ ಮುಂದಾಗಿ ಬಂದಿದ್ದಾರೆ ಎನ್ನಲಾಗಿದೆ.

ಕೊರೊನಾ ಪೀಡಿತರಿಗೆ ಮನುಷ್ಯನ ದೇಹದ ಪ್ಲಾಸ್ಮಾ ಬಳಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ. ಈ ಚಿಕಿತ್ಸೆಯಿಂದಾಗಿ ರೋಗಿಯ ದೇಹದಲ್ಲಿ 12ರಿಂದ 24 ಗಂಟೆಗಳಲ್ಲಿ ವೈರಸ್​ ಪ್ರಮಾಣ ಕಡಿಮೆಯಾಗಿ ಅವರು ಗುಣಮುಖರಾಗುತ್ತಾರೆ ಎನ್ನಲಾಗಿದೆ.

ಶನಿವಾರದಂದು ಶಾಂಘೈನಲ್ಲಿ ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯಿಂದ 124 ಜನರು ಗುಣಮುಖರಾಗಿ ತಮ್ಮ ಮನೆಯತ್ತ ತೆರಳಿದ್ದಾರೆ. ಈ ಪೈಕಿ 20 ಜನರು ಆಸ್ಪತ್ರೆಯಿಂದ ತೆರಳುವ ವೇಳೆ ಪ್ಲಾಸ್ಮಾ ದಾನ ಮಾಡುವುದಾಗಿ ತಿಳಿಸಿ ಹೋಗಿದ್ದಾರೆ. ಗುಣಮುಖರಾಗಿ 10 ದಿನಗಳ ನಂತರ ಅವರ ದೇಹದಿಂದ ಪ್ಲಾಸ್ಮಾ ದಾನ ತೆಗೆದುಕೊಳ್ಳಲಾಗುವುದು.

ಇದೇ ವೇಳೆ ವುಹಾನ್​ನಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿರುವ ಜಿನಿಂಟನ್​ ಆಸ್ಪತ್ರೆಯ ಮುಖ್ಯಸ್ಥ ಜಾಂಗ್​ ಡಿಂಗ್ಯು , ಪ್ಲಾಸ್ಮಾ ದಾನ ಮಾಡುವಂತೆ ಜನಸಾಮಾನ್ಯರಲ್ಲಿ ಕೇಳಿಕೊಂಡಿದ್ದಾರೆ. (ಏಜೆನ್ಸೀಸ್​)