ಕೊಳ್ಳೇಗಾಲ: ತಾಲೂಕಿನ ಮೂಳ್ಳೂರು ಶ್ರೀ ಕಾವೇರಿ ಮೀನುಗಾರರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಸೋಮವಾರ 12 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಮುಳ್ಳೂರು ಗ್ರಾಮದ ಸಂಘದ ಕಚೇರಿಯಲ್ಲಿ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಅಧೀಕ್ಷಕರು ಹಾಗೂ ರಿಟನಿರ್ಂಗ್ ಅಧಿಕಾರಿ ಎಸ್.ನಾಗೇಶ್ ನಾಮ ಪತ್ರ ಸ್ವೀಕರಿಸಿದರು.
ಸಂಘದಲ್ಲಿ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಒಳಗೊಂಡತೆ 13 ನಿರ್ದೇಶಕರ ಸ್ಥಾನವಿದೆ. ಈ ಪೈಕಿ 5 ವರ್ಷದ ಅವಧಿಗೆ 12 ನಿರ್ದೇಶಕರ ಆಯ್ಕೆಗೆ ಚುನಾವಣೆ ನಿಗದಿಪಡಿಸಲಾಗಿದೆ. ಸಾಮಾನ್ಯ 6, ಪರಿಶಿಷ್ಟ ಜಾತಿ (ಮೀಸಲು)1, ಪರಿಶಿಷ್ಟ ಪಂಗಡ 1, ಪ್ರವರ್ಗ ಎ. ಮೀಸಲು ಸ್ಥಾನ 1, ಪ್ರವರ್ಗ ಬಿ.ಮೀಸಲು ಸ್ಥಾನಕ್ಕೆ 1, ಮಹಿಳಾ ಸ್ಥಾನ 2 ಕ್ಕೆ ಸ್ಪರ್ಧೆ ನಡೆಯಲಿದೆ. ಅಂತೆಯೇ, ಸಾಮಾನ್ಯ ಸ್ಥಾನಕ್ಕೆ ಸಿದ್ದಶೆಟ್ಟಿ, ಎಂ.ಕೆ.ಪುಟ್ಟಸ್ವಾಮಿ, ವಿ.ಚಂದ್ರಶೇಖರ, ಎಂ.ಕೃಷ್ಣ, ಮಹದೇವ, ಎಂ.ಶ್ರೀಧರ, ಶಂಭುಲಿಂಗಶೆಟ್ಟಿ, ಎಂ.ಕೃಷ್ಣಮೂರ್ತಿ, ಮಹಿಳಾ ಮೀಸಲು ಸ್ಥಾನಕ್ಕೆ ಬಿ.ಶಿವಮ್ಮ, ಸಾಕಮ್ಮ, ಪ್ರವರ್ಗ ಎ ಮೀಸಲು ಸ್ಥಾನಕ್ಕೆ ಎಸ್.ಸಿದ್ದಶೆಟ್ಟಿ, ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಸಿದ್ದರಾಜ ನಾಯಕ ನಾಮಪತ್ರ ಸಲ್ಲಿಸಿದರು. ಸಂಘದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಸದಸ್ಯರು ಹಾಗೂ ಪ್ರವರ್ಗ ಬಿ ವರ್ಗಕ್ಕೆ ಸೇರಿದ ಸದಸ್ಯರು ಇಲ್ಲದ ಕಾರಣ ಈ ಸ್ಥಾನಕ್ಕೆ ನಾಮ ಪತ್ರ ಸಲ್ಲಿಕೆ ಆಗಲಿಲ್ಲ.
ಮೇ 27ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮೇ 28 ರಂದು ನಾಮಪತ್ರ ಹಿಂಪಡೆಯಲು ಅವಕಾಶವಿರಲಿದೆ. ಜೂನ್ 2 ರಂದು ಚುನಾವಣೆ ನಡೆಯಲಿದೆ. ಸಂಘದಲ್ಲಿ ಮುಳ್ಳೂರು, ಕೊಳ್ಳೇಗಾಲ, ಉಪ್ಪಾರ ಮೋಳೆ, ಉತ್ತಂಬಳ್ಳಿ ಗ್ರಾಮಕ್ಕೆ ಸೇರಿದ 181 ಜನ ಸದಸ್ಯರಿದ್ದಾರೆ.