ನ್ಯೂಸ್

ಟಿವಿ ರಿಪೋರ್ಟರ್​ಗೆ ಪಿಸ್ತೂಲ್​ ತೋರಿಸಿ ಬೆದರಿಸಿ ಸುಲಿಗೆ; ಲೈವ್​ನಲ್ಲಿದ್ದಾಗಲೇ ನಡೆಯಿತು ಕಿಡಿಗೇಡಿಯ ಕೃತ್ಯ

ನವದೆಹಲಿ: ಕಳ್ಳ ಸಾಮಾನ್ಯವಾಗಿ ತನ್ನ ಕೃತ್ಯದ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾಯಿತೆಂದರೆ ಮುಜುಗರಕ್ಕೆ ಒಳಗಾಗುತ್ತಾನೆ. ಅಂಥದ್ದರಲ್ಲಿ ಇಲ್ಲೊಬ್ಬ ಕಳ್ಳ ಟಿವಿ ಚಾನೆಲೊಂದರ ಲೈವ್ ಪ್ರಸಾರ ನಡೆಯುತ್ತಿದ್ದಾಗಲೇ ಯಾವುದೇ ಮುಜುಗರವಿಲ್ಲದೆ ಧಾವಿಸಿ, ಪಿಸ್ತೂಲ್ ಹಿಡಿದುಕೊಂಡು ಬೆದರಿಸಿ, ರಿಪೋರ್ಟರ್ ಹಾಗೂ ಕ್ಯಾಮರಾಮ್ಯಾನ್​ನಿಂದ ಹಣ ದೋಚಿಕೊಂಡು ಪರಾರಿಯಾಗಿದ್ದಾನೆ.

ಫೆ. 12ರಂದು ಈ ಘಟನೆ ಸಂಭವಿಸಿದ್ದು, ಈ ಕುರಿತ ವಿಡಿಯೋ ವೈರಲ್​ ಆಗಿದೆ. ಈಕ್ವಡಾರ್​ನ ಇಸಿಡ್ರೊ ರೊಮೆರೊ ಕಾರ್ಬೊ ಮಾನುಮೆಂಟಲ್​ ಸ್ಟೇಡಿಯಮ್​ನಲ್ಲಿ ಅಲ್ಲಿನ ಸ್ಪೋರ್ಟ್ ಚಾನೆಲೊಂದರ ಪತ್ರಕರ್ತ ಡೀಗೊ ಒರ್ಡಿನೊಲಾ ಲೈವ್ ರಿಪೋರ್ಟಿಂಗ್ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಏಕಾಂಗಿ ಆಗಂತುಕ ಮುಖಕ್ಕೆ ಮಾಸ್ಕ್​ ಹಾಗೂ ಕ್ಯಾಪ್​ ಧರಿಸಿಕೊಂಡು ಬಂದಿದ್ದರಿಂದ ಗುರುತು ಮರೆಮಾಚಿದ್ದು, ಹಣ ದೋಚಿಕೊಂಡು ಹೋದ ಆತನನ್ನು ಕೊನೆಗೆ ರಿಪೋರ್ಟರ್ ಹಾಗೂ ಕ್ಯಾಮರಾಮ್ಯಾನ್ ಹಿಂಬಾಲಿಸಿಕೊಂಡು ಹೋದರೂ ಆತ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ.

ಈ ಕುರಿತ ವಿಡಿಯೋ ಹಂಚಿಕೊಂಡಿರುವ ಒರ್ಡಿನೊಲಾ, ನಾವು ನೆಮ್ಮದಿಯಾಗಿ ಕೆಲಸ ಮಾಡುವಂತೆಯೂ ಇಲ್ಲ, ಮಧ್ಯಾಹ್ನ 1 ಗಂಟೆಯಲ್ಲೇ ಹೀಗೆಲ್ಲ ನಡೆದಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಹಲವರು ಮಾಧ್ಯಮ ಪ್ರತಿನಿಧಿಗಳ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಅವರಿಗೆ ಬೆಂಬಲ ಸೂಚಿಸಿ ಕಮೆಂಟ್ ಮಾಡಿದ್ದಾರೆ. ಆರೋಪಿಯನ್ನು ಶೀಘ್ರ ಪತ್ತೆ ಹಚ್ಚುವುದಾಗಿ ಭರವಸೆ ನೀಡಿದ್ದಾರೆಂದು ರಿಪೋರ್ಟರ್ ತಿಳಿಸಿದ್ದಾರೆ. (ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ