ಫ್ಲೋರಿಡಾದ ಟಿವಿ ಜರ್ನಲಿಸ್ಟ್ಗೆ ಒಂದು ದಿನ ವೀಕ್ಷಕರೊಬ್ಬರಿಂದ ಒಂದು ಮೇಲ್ ಬರುತ್ತದೆ. ಆಕೆ ಚಾನಲ್ವೊಂದರ ಪ್ರಮುಖ ವರದಿಗಾರ್ತಿಯಾಗಿದ್ದರಿಂದ ವಾಕ್ ಥ್ರೂ ಮಾಡುವಾಗ ಟಿವಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಾರೆ. ಹೀಗೆ ಒಂದು ದಿನ ಟಿವಿಯಲ್ಲಿ ಕಾಣಿಸಿಕೊಂಡ ಅವರಿಗೆ, ಪ್ರತಿದಿನ ಚಾನಲ್ ನೋಡುತ್ತಿದ್ದ ವೀಕ್ಷಕಿ ಇ-ಮೇಲ್ ಕಳಿಸಿ ಒಂದು ವಿಚಾರವನ್ನು ಹೇಳುತ್ತಾರೆ. ಇದೀಗ ಆ ಪತ್ರಕರ್ತೆ ಮೇಲ್ ಮಾಡಿದ ವೀಕ್ಷಕಿಗೆ ಕೋಟಿ ನಮನಗಳನ್ನು ಸಲ್ಲಿಸುತ್ತಿದ್ದಾಳೆ.
ಡಬ್ಲ್ಯೂಎಫ್ಎಲ್ಎ ನ್ಯೂಸ್ ಎಂಬ ಸುದ್ದಿ ಮಾಧ್ಯಮದ ತನಿಖಾ ವರದಿಗಾರ್ತಿಯಾದ ವಿಕ್ಟೋರಿಯಾ ಪ್ರೈಸ್ ಟ್ವೀಟ್ ಮಾಡುವ ಮೂಲಕ ಈ ವಿಚಾರ ತಿಳಿಸಿದ್ದಾರೆ. ನನ್ನ ಕಾರ್ಯಕ್ರಮದ ಮಹಿಳಾ ವೀಕ್ಷಕರೋರ್ವರು ಮೇಲ್ ಮಾಡಿ, ಮೇಡಂ...ನಾನೀಗಷ್ಟೇ ನಿಮ್ಮ ವರದಿಯನ್ನು ನೋಡಿದೆ. ನಿಮ್ಮ ಕುತ್ತಿಗೆಯ ಭಾಗ ಉಬ್ಬಿದೆ. ಅಲ್ಲೇನೋ ಗಡ್ಡೆಯಾದಂತೆ ಕಾಣಿಸುತ್ತಿದೆ. ನನಗೂ ಹಾಗೇ ಆಗಿತ್ತು. ಮೊದಲು ಟೆಸ್ಟ್ ಮಾಡಿಸದೆ ನಂತರ ಅದು ಕ್ಯಾನ್ಸರ್ಗೆ ತಿರುಗಿತ್ತು. ದಯವಿಟ್ಟು ನೀವು ಒಮ್ಮೆ ವೈದ್ಯರ ಬಳಿ ಹೋಗಿ. ಥೈರಾಯಿಡ್ ಟೆಸ್ಟ್ ಮಾಡಿಸಿ. ಟೇಕ್ ಕೇರ್ ಎಂದು ಬರೆದಿದ್ದರು.
ನಂತರ ನಾನೂ ಹೋಗಿ ಟೆಸ್ಟ್ ಮಾಡಿಸಿದೆ. ಇದೀಗ ನನಗೂ ಕ್ಯಾನ್ಸರ್ ಇರುವುದು ದೃಢಪಟ್ಟಿದೆ ಎಂದು ಟ್ವೀಟ್ ಮಾಡಿದ್ದಾರೆ.
ನನಗೆ ಶೀಘ್ರದಲ್ಲೇ ಸರ್ಜರಿ ಆಗಲಿದೆ. ಸದ್ಯದ ಮಟ್ಟಿಗೆ ಸುರಕ್ಷಿತವಾಗಿದ್ದೇನೆ. ಕ್ಯಾನ್ಸರ್ ಒಳಗೆ ಹರಡುತ್ತಿದ್ದರೂ ಅದು ತೀವ್ರಗತಿಯಲ್ಲಿ ಇಲ್ಲ. ಸರ್ಜರಿ ಮಾಡಿ ಗಡ್ಡೆ ತೆಗೆದರೆ ಸಾಕು...ಸದ್ಯಕ್ಕೆ ಕಿಮೋ ಚಿಕಿತ್ಸೆ ಬೇಡ ಎಂದು ವೈದ್ಯರು ತಿಳಿಸಿದ್ದಾರೆ ಎಂದು ವಿಕ್ಟೋರಿಯಾ ಪ್ರೈಸ್ ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನದ ಶಂಕೆ ಕಾಂಗ್ರೆಸ್‍ಗೆ: ಮಣಿಪುರದ ಇಬ್ಬರು ಶಾಸಕರಿಗೆ ಶೋಕಾಸ್ ನೋಟಿಸ್!
ನನ್ನ ಕುತ್ತಿಗೆಯ ಮೇಲೆ ಇರುವ ಉಬ್ಬು ಅಷ್ಟು ಬೇಗ ಕಾಣಿಸುವಂಥದ್ದಲ್ಲ. ಅದನ್ನು ಸೂಕ್ಷ್ಮವಾಗಿ ಗಮನಿಸದರಷ್ಟೇ ಗೊತ್ತಾಗುತ್ತದೆ. ಅಂಥದ್ದರಲ್ಲಿ ಆ ಮಹಿಳೆ ಅದನ್ನು ನೋಡಿ, ಸುಮ್ಮನಾಗದೆ ಮೇಲ್ ಕೂಡ ಮಾಡಿದ್ದಾರೆ. ಕರೊನಾ ಸಾಂಕ್ರಾಮಿಕ ಶುರುವಾದ ಮೇಲೆ ವಿಪರೀತ ಕೆಲಸ. ಆರೋಗ್ಯದ ಬಗ್ಗೆ ಲಕ್ಷ್ಯವೇ ಇಲ್ಲದಂತಾಗಿತ್ತು. ಇದೀಗ ಮಹಿಳೆ ನನ್ನನ್ನು ಎಚ್ಚರಿಸದೆ ಇದ್ದರೆ ಅದಿನ್ನೆಷ್ಟು ದಿನ ಹೀಗೆ ಇರುತ್ತಿದ್ದೆನೋ ಗೊತ್ತಿಲ್ಲ. ಬಹುಶ್ಯಃ ನನ್ನ ಜೀವಕ್ಕೆ ಅಪಾಯ ಬರುತ್ತಿತ್ತು ಎಂದಿದ್ದಾರೆ.
ನಾನಂತೂ ಆ ಮಹಿಳೆಗೆ ಯಾವಾಗಲೂ ಋಣಿಯಾಗಿರುತ್ತೇನೆ. ಅವರು ಅಪರಿಚಿತರು..ನನಗೇನು ಎಂದು ಬಿಟ್ಟುಬಿಡಬಹುದಿತ್ತು. ಆದರೆ ಇ-ಮೇಲ್ ಮಾಡಿ ನನ್ನ ಪ್ರಾಣ ಉಳಿಸಿದರು ಎಂದು ವಿಕ್ಟೋರಿಯಾ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇದೀಗ ಚಿಕಿತ್ಸೆ ಪಡೆಯಲು ಸಿದ್ಧರಾಗುತ್ತಿದ್ದಾರೆ.
ಇನ್ನು ವಿಕ್ಟೋರಿಯಾ ಅವರ ಟ್ವೀಟ್ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಕ್ಯಾನ್ಸರ್ ಗೆದ್ದ ಹಲವರು ಆಕೆಗೆ ಧೈರ್ಯ ತುಂಬಿದ್ದಾರೆ. ಇ-ಮೇಲ್ ಮಾಡಿ ಎಚ್ಚರಿಸಿದ ಮಹಿಳೆಯನ್ನೂ ಹೊಗಳಿದ್ದಾರೆ.(ಏಜೆನ್ಸೀಸ್)