ನ್ಯೂಸ್

ನಮ್ಮ ರಾಷ್ಟ್ರದ ಅತ್ಯಂತ ಪ್ರಬಲ ಶಕ್ತಿ ಜ್ಞಾನ: ಟಿ.ವಿ ಮೋಹನ್ ದಾಸ್ ಪೈ

ಬೆಂಗಳೂರು: ವಿದ್ವಾಂಸನಿಗೆ ಪ್ರಥಮ ಆದ್ಯತೆ ನೀಡುವ ಏಕೈಕ ಸಮಾಜ ಭಾರತೀಯ ಸಮಾಜ. ಜ್ಞಾನವೇ ನಮ್ಮ ರಾಷ್ಟ್ರದಲ್ಲಿ ಅತ್ಯಂತ ಪ್ರಬಲವಾದ ಶಕ್ತಿ. ಈ ಶಕ್ತಿ ಜನರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತಿತ್ತು ಮತ್ತು ಸಮಾನವಾಗಿ ಕಾಣುತ್ತಿತ್ತು. ಇಂದು ಇಂತಹ ಜ್ಞಾನಾಧಾರಿತ ಸಮಾಜ ಅನೇಕ ಆಯಾಮಗಳಲ್ಲಿ ಹಳಿಯುವಿಕೆಗೆ ಒಳಗಾಗಿದೆ. ಆದರೆ ಇಂದು ರಶ್ಮಿ ಸಾಮಂತ್‌ರಂತಹ ಯುವಕರು ಅವುಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ. ಅಂತಹ ಯುವಕರು ಮಾದರಿ ಎಂದು ಆರಿನ್ ಕ್ಯಾಪಿಟಲ್ ಪಾರ್ಟ್ನರ್ಸ್ ಚೇರ್‌ಮೆನ್ ಟಿ.ವಿ ಮೋಹನ್ ದಾಸ್ ಪೈ ಹೇಳಿದರು.

ನಗರದ ಬಸವನಗುಡಿಯ ಡಾ. ಸಿ. ಅಶ್ವತ್ಥ್ ಕಲಾಭವನದಲ್ಲಿ ಥಿಂಕರ್ಸ್ ಫೋರಮ್ ಆಯೋಜಿಸಿದ್ದ ‘ಎ ಹಿಂದೂ ಇನ್ ಆಕ್ಸ್ ಫರ್ಡ್’ ಕೃತಿ ಲೋಕಾರ್ಪಣೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾವು ಶ್ರೇಷ್ಠವಾದ ಪುರಾತನ ಸಂಸ್ಕೃತಿಗೆ, ಸತ್ಯಶೋಧನೆಗೆ ತೊಡಗಿದ ಸಮಾಜಕ್ಕೆ ಸೇರಿದವರು ಎಂಬ ಹೆಮ್ಮೆ ನಮಗಿರಬೇಕು. ನಮ್ಮ ಮಕ್ಕಳಿಗೆ ಎಂದೆಂದಿಗೂ ಫ್ಯಾಸಿಸಮ್‌ಗೆ, ದೌರ್ಜನ್ಯಕ್ಕೆ ತಲೆಬಾಗಬಾರದು ಎನ್ನುವುದನ್ನು ತಿಳಿಸಬೇಕು. ನಾವು ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ನಮ್ಮ ನಂಬಿಕೆಯ ಪರ ದೃಢವಾಗಿ ನಿಲ್ಲುವ ಧೈರ್ಯವನ್ನು ಕಲಿಸಬೇಕು. ವಸುಧೈವ ಕುಟುಂಬಕಮ್ ಎಂಬ ಕಲ್ಪನೆಯನ್ನು ಅನುಸರಿಸುವ ನಾವು ಜಗತ್ತೇ ಒಂದು ಕುಟುಂಬ ಎನ್ನುವುದನ್ನು ಆಚರಿಸುತ್ತೇವೆ ಎಂದು ಹೇಳಿದರು.