ನ್ಯೂಸ್

ಬಾಲಿವುಡ್ ನಟಿ ಪ್ರಿಯಾ ಮರಾಠೆ ನಿಧನ! ಚಿಕ್ಕ ವಯಸ್ಸಿನಲ್ಲೇ ದುರಂತ ಅಂತ್ಯ ಕಂಡ ಸೀರಿಯಲ್ ಕಲಾವಿದೆ | Priya Marathe

Priya Marathe: ಬಾಲಿವುಡ್​ನ ದೂರದರ್ಶನ ಉದ್ಯಮದಲ್ಲಿ ನಟಿಯಾಗಿ ಬೆಳೆಯುವ ಅಪಾರ ಕನಸು ಹೊತ್ತಿದ್ದ ಯುವನಟಿ ಪ್ರಿಯಾ ಮರಾಠೆ (38) ಇಂದು (ಆ.31) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಪ್ರಿಯಾ, ಕಾಯಿಲೆ ಕಾಣಿಸಿಕೊಂಡ ಆರಂಭದ ಹಂತದಲ್ಲಿ ನಟನೆಯಿಂದ ವಿರಾಮ ತೆಗೆದುಕೊಂಡರು. ಈ ವೇಳೆ ನಿರಂತರ ಚಿಕಿತ್ಸೆಗೆ ಒಳಗಾಗಿದ್ದರು. ಇದಾದ ಬಳಿಕ ತಾನು ಗುಣಮುಖಳಾಗಿದ್ದೇನೆ ಎಂದು ಭಾವಿಸಿ, ನಟನಾ ವೃತ್ತಿಗೆ ಮರಳಿದ್ದರು. ಆದರೆ, ಕ್ಯಾನ್ಸರ್​ ಇನ್ನಷ್ಟು ಹೆಚ್ಚಾಗಿ ಇದೀಗ ಅವರ ಜೀವವನ್ನೇ ಬಲಿಪಡೆದಿರುವುದು ನಿಜಕ್ಕೂ ದುರಂತವೇ.

20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿರುವ ಪ್ರಿಯಾ ಮರಾಠೆ, 2006ರಿಂದ ದೂರದರ್ಶನ ಉದ್ಯಮದಲ್ಲಿದ್ದಾರೆ. ಸೀರಿಯಲ್ ಜತೆ ಜತೆಗೆ​ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. 2012ರಲ್ಲಿ ತಮ್ಮದೇ ಚಿತ್ರರಂಗದ ಹಿರಿಯ ನಟನ ಮಗನನ್ನು ವಿವಾಹವಾದ ಅವರು, 38ನೇ ವಯಸ್ಸಿಗೆ ಕ್ಯಾನ್ಸರ್​ನಿಂದ ಸಾವನ್ನಪ್ಪಿದ ವಿಚಾರ ಸದ್ಯ ಹಲವರಿಗೆ ಅರಗಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ.

ಇಂದು ಬೆಳಗ್ಗೆ ತಮ್ಮ ಮುಂಬೈ ನಿವಾಸದಲ್ಲಿ ಪ್ರಿಯ ನಿಧನರಾಗಿದ್ದು, ನಟಿಯ ಸಾವಿನ ಸುದ್ದಿ ತಿಳಿದ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ,(ಏಜೆನ್ಸೀಸ್).